ನೋಟು ರದ್ದತಿ ಉದ್ದೇಶ, ಪರಿಣಾಮದ ಕುರಿತು ‘ಬಹಿರಂಗ ಮುಕ್ತ ಚರ್ಚೆ’ಗೆ ಬಿಜೆಪಿ ನಾಯಕರಿಗೆ ಆಹ್ವಾನ

*ನೋಟು ರದ್ದತಿ ಉದ್ದೇಶ, ಪರಿಣಾಮದ ಕುರಿತು ‘ಬಹಿರಂಗ ಮುಕ್ತ ಚರ್ಚೆ’ಗೆ ಬಿಜೆಪಿ ನಾಯಕರಿಗೆ ಆಹ್ವಾನ*

*ಪ್ರಮುಖ ಪ್ರಶ್ನೆಗಳ ಕುರಿತು ಮುಖಾಮುಖಿ ಚರ್ಚೆ: ಉದ್ದಿಮೆದಾರರು, ರೈತರು, ವರ್ತಕರು, ಕಾರ್ಮಿಕ ಸಂಘಗಳು, ಹಿರಿಯ ಗಣ್ಯರು, ಬ್ಯಾಂಕ್ ನೌಕರರು, ಅನೌಪಚಾರಿಕ ವಲಯ, ಸಿನೆಮಾ ಕ್ಷೇತ್ರ, ಬೀದಿ ವ್ಯಾಪಾರಿಗಳಿಂದ ಪ್ರತಿಕ್ರಿಯೆ*

*ಬನ್ನಿ ಸತ್ಯಕ್ಕೆ ಮುಖಾಮುಖಿಯಾಗೋಣ, ಕಪ್ಪುಹಣದ ವಿರುದ್ಧ ನಿರ್ಣಾಯಕ ಹೋರಾಟದಿಂದ ಪ್ರಧಾನಿ ಓಡಿ ಹೋಗಬಾರದು*

ಎರಡು ತಿಂಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಅದರ ಬಗ್ಗೆ ಎರಡು ವಿರುದ್ಧ ಧ್ರುವಗಳಲ್ಲಿ ಪರ ಮತ್ತು ವಿರುದ್ಧದ ಚರ್ಚೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನಿಂದಲೂ ಕಪ್ಪುಹಣದ ಕುರಿತು, ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ಸು ತರುವ ಕುರಿತು, ಕಪ್ಪುಸಂಪತ್ತಿನ ವಿರುದ್ಧ ಸಮರ ಸಾರಬೇಕಾದ ಕುರಿತು ನರೇಂದ್ರ ಮೋದಿಯವರು ಹಾಗೂ ಬಿಜೆಪಿ ಮಾತನಾಡುತ್ತಲೇ ಇದ್ದರು. ನವೆಂಬರ್ 8ರಂದು ನೋಟು ರದ್ದತಿಯ ತೀರ್ಮಾನವನ್ನು ಘೋಷಿಸಿದ ಸಂದರ್ಭದಲ್ಲೂ ಪ್ರಧಾನಿಯವರು ಅದನ್ನು ಒತ್ತಿ ಹೇಳಿದರು. ಇದೊಂದು ಐತಿಹಾಸಿಕ ತೀರ್ಮಾನ ಎಂದು ಘೋಷಿಸಲಾಯಿತು. ದೇಶಕ್ಕೆ ಆಗುತ್ತಿರುವ ಭಾರೀ ಪ್ರಮಾಣದ ಲಾಭವನ್ನು ಪಡೆದುಕೊಳ್ಳಲು, 50 ದಿನಗಳ ಕಾಲ ಸ್ವಲ್ಪ ತೊಂದರೆಯನ್ನು ಸಹಿಸಿಕೊಳ್ಳಬೇಕೆಂಬ ಕರೆಯನ್ನು ನೀಡಲಾಯಿತು.
ಈಗ ಈ ಕ್ರಮದಿಂದ ಎಷ್ಟು ಪ್ರಮಾಣದ ಕಪ್ಪುಹಣವನ್ನು ಹಿಡಿಯಲು ಸಾಧ್ಯವಾಯಿತು ಎಂಬುದರ ಕುರಿತು ಉತ್ತರ ನೀಡದೇ ರಿಸರ್ವ್.ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಈ ಮಧ್ಯೆ ನಗದು ರಹಿತ ಆರ್ಥಿಕತೆಯ ಕುರಿತು ಸಾಕಷ್ಟು ಚರ್ಚೆ ಹಾಗೂ ಕ್ರಮಗಳು ಶುರುವಾಗಿವೆ.
ಇವೆಲ್ಲವೂ ದೇಶದ ಆರ್ಥಿಕತೆಯ ಮೇಲೆ, ಅದರಲ್ಲೂ ಜನಸಾಮಾನ್ಯರ ಮೇಲೆ ಭಾರೀ ದೊಡ್ಡ ಪರಿಣಾಮವನ್ನು ಬೀರಿದೆ. ದೇಶಕ್ಕೆ ಸುಮಾರು 1.50 ಲಕ್ಷ ಕೋಟಿ ರೂ.ಗಳಿಂದ 4.50 ಲಕ್ಷ ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಎಂದು ಕೆಲವು ಸ್ವತಂತ್ರ ಸಂಸ್ಥೆಗಳ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ, ಒಂದು ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣವೂ ದೇಶದ ಬೊಕ್ಕಸಕ್ಕೆ ಬಂದಂತೆ ಆಗಿಲ್ಲ. ಈ ಪ್ರಮಾಣದ ವಿರುದ್ಧ ಅಭಿಪ್ರಾಯಗಳು ಇರುವಾಗ ಪರಸ್ಪರ ಆರೋಪ ಮಾಡಿಕೊಂಡು ಇರುವುದು ಸರಿಯಲ್ಲ. ಏಕೆಂದರೆ ಕಪ್ಪುಹಣದ ವಿರುದ್ಧ ನಿರ್ಣಾಯಕ ಹೋರಾಟ ಅತ್ಯಗತ್ಯವಾದುದು. ನಗದುರಹಿತ ಆರ್ಥಿಕತೆ ಬರುವುದರಿಂದ ದೇಶಕ್ಕೆ ಒಳ್ಳೆಯದಾಗುವುದಿದ್ದರೆ ಅದರ ಕುರಿತೂ ಚರ್ಚೆ ನಡೆದು ಜಾರಿಯಾಗಬೇಕು. ಇಲ್ಲದಿದ್ದರೆ, ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬುದು ಬಹಿರಂಗವಾಗಬೇಕು. ನೋಟು ರದ್ದತಿ ಕ್ರಮದಿಂದ ಯಾರಿಗೆ ನಷ್ಟವಾಗಿದೆಯೋ ಅವರಿಗೆ ಅದನ್ನು ತುಂಬಿಕೊಡಬೇಕು.
ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ಸುಗಳ ಆರೋಪ ಪ್ರತ್ಯಾರೋಪಗಳಲ್ಲಿ ಇದಾವುದೂ ಸಾಧ್ಯವಾಗುವಂತೆ ಕಾಣುತ್ತಿಲ್ಲ. ಬದಲಿಗೆ ಈಗಾಗಲೇ ದೇಶದ ಉದ್ದಿಮೆದಾರರು ಕೇಂದ್ರ ಹಣಕಾಸು ಸಚಿವರನ್ನು ಕಂಡು ತಮಗೆ ತೆರಿಗೆ ವಿನಾಯಿತಿ ಕೊಡಬೇಕೆಂದು ಕೇಳಿದ್ದಾರೆ ಮತ್ತು ಅರುಣ್ ಜೇಟ್ಲಿಯವರು ತೆರಿಗೆ ಕಡಿತಗೊಳಿಸುವ ಭರವಸೆಯನ್ನೂ ನೀಡಿದ್ದಾರೆ. ಬಹುಶಃ ಬಿಜೆಪಿ, ಕಾಂಗ್ರೆಸ್ಸುಗಳ ಈ ಪ್ರಹಸನವು ಕಡೆಯಲ್ಲಿ ಗೊಂದಲವನ್ನಷ್ಟೇ ಸೃಷ್ಟಿಸಿ, ಜನಸಾಮಾನ್ಯರ ಕೊರಳಿಗೆ ಉರುಳಾಗುವ ಸಾಧ್ಯತೆಯೇ ಹೆಚ್ಚು.
ಈ ಹಿನ್ನೆಲೆಯಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಕೆಲವು ಸಂಘಟನೆಗಳು ಬಿಜೆಪಿಯ ಪ್ರತಿನಿಧಿಗಳನ್ನು ‘ಬಹಿರಂಗ ಮುಕ್ತ ಚರ್ಚೆಗೆ’ ಆಹ್ವಾನಿಸುತ್ತಿದ್ದೇವೆ. ನೋಟು ರದ್ದತಿಯಿಂದ ಒಳ್ಳೆಯದಾಗಿದೆ ಎಂದು ಬಿಜೆಪಿ ಪಕ್ಷ ಹಾಗೂ ಅದರ ಬೆಂಬಲಿಗರು ನಿಜಕ್ಕೂ ಭಾವಿಸುವುದಾದಲ್ಲಿ ಅವರು ಈ ಚರ್ಚೆಗೆ ಹಿಂಜರಿಯುವುದಿಲ್ಲವೆಂದು ಭಾವಿಸುತ್ತೇವೆ. ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅದರ ವಕ್ತಾರ ಸಿ.ಟಿ.ರವಿ, ಕೇಂದ್ರ ಮಂತ್ರಿ ಅನಂತಕುಮಾರ್ ಅಥವಾ ಈ ಕ್ರಮವನ್ನು ಸಮರ್ಥಿಸಿಕೊಂಡು ರಾಜ್ಯದ ಹಲವೆಡೆ ಭಾಷಣ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅಥವಾ ಬಿಜೆಪಿ ಪಕ್ಷವು ಸೂಚಿಸುವ ಇನ್ನಾರೇ ವ್ಯಕ್ತಿ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಈ ಮೂಲಕ ಬಹಿರಂಗವಾಗಿ ಆಹ್ವಾನಿಸುತ್ತಿದ್ದೇವೆ.
ಈ ಬಹಿರಂಗ ಮುಕ್ತ ಚರ್ಚೆಯು ಜನವರಿ 22ರಂದು 10.30ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್ನಲ್ಲಿ ನಡೆಯಲಿದೆ. ಕಪ್ಪುಹಣದ ವಿರುದ್ಧದ ಸಮರದಲ್ಲಿ ದೊಡ್ಡ ಪಾತ್ರ ವಹಿಸಿರುವ, ಕಾಂಗ್ರೆಸ್ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆಳೆದ ಸುಪ್ರೀಂಕೋರ್ಟ್‍.ನ ಹಿರಿಯ ವಕೀಲ ಹಾಗೂ ಸ್ವರಾಜ್ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಭೂಷಣ್ರುೆ ಈ ಕಾರ್ಯಕ್ರಮದಲ್ಲಿ ಆಶಯ ಭಾಷಣವನ್ನು ಮಾಡಲಿದ್ದಾರೆ. ಆ ನಂತರ ಸತ್ಯಕ್ಕೆ ಮುಖಾಮುಖಿಯಾಗುವ ಚರ್ಚೆ ನಡೆಯುತ್ತದೆ.
ಚರ್ಚೆಯು ರಾಜ್ಯದ ರೈತ ಪ್ರತಿನಿಧಿಗಳು, ಸಣ್ಣ ಉದ್ದಿಮೆದಾರರು, ಎಪಿಎಂಸಿ ವರ್ತಕರು, ಬೀದಿ ವ್ಯಾಪಾರಿಗಳು, ವರ್ತಕರು, ಕಾರ್ಮಿಕ ಸಂಘಗಳು, ಅನೌಪಚಾರಿಕ ವಲಯ, ಗ್ರಾಮೀಣ ಬ್ಯಾಂಕ್ ಮತ್ತು ಸಹಕಾರ ಕ್ಷೇತ್ರ, ಸಿನೆಮಾ ಕ್ಷೇತ್ರ, ಕಟ್ಟಡ ನಿರ್ಮಾಣ ಕ್ಷೇತ್ರ, ಆಟೋ ಚಾಲಕರು, ಹೋಟೆಲ್ ಉದ್ದಿಮೆ, ಸಾರಿಗೆ ಉದ್ದಿಮೆಗಳ ಪ್ರತಿನಿಧಿಗಳು ಮತ್ತು ಇನ್ನಿತರ ಗಣ್ಯರ ಎದುರಿನಲ್ಲಿ ನಡೆಯುತ್ತದೆ ಮತ್ತು ಅವರೂ ಈ ಚರ್ಚೆಯಲ್ಲಿ ಪ್ರತಿಕ್ರಿಯಿಸಲಿದ್ದಾರೆ.

ಈ ಕೆಳಕಂಡ ಅಂಶಗಳು ಚರ್ಚೆಯಲ್ಲಿ ಇರಬೇಕೆಂದು ನಾವು ಸೂಚಿಸುತ್ತಿದ್ದೇವೆ.

*ನೋಟು ರದ್ದತಿಯ ಕ್ರಮದಿಂದ ಕಪ್ಪುಹಣ ಕಡಿಮೆಯಾಗಲು ಸಾಧ್ಯವಿತ್ತೇ? ಕೇಂದ್ರ ಸರ್ಕಾರ ಹೇಳಿದಷ್ಟು ಕಪ್ಪುಹಣ ಪತ್ತೆಯಾಯಿತೇ?*
*ಈ ಕ್ರಮದಿಂದ ತಕ್ಷಣದಲ್ಲಿ ನಷ್ಟ ಯಾರಿಗೆ ಆಗಿದೆ? ಎಷ್ಟು ಆಗಿದೆ? ಲಾಭ ಯಾರಿಗೆ ಆಗಿದೆ? ಎಷ್ಟು ಆಗಿದೆ?*
*ಕಪ್ಪುಹಣ ಹೊರಗೆ ಬರಲು ನಿಜಕ್ಕೂ ಆಗಬೇಕಾದ ಕ್ರಮಗಳು ಯಾವುವು? ಅದರ ಬಗ್ಗೆ ಮೋದಿ ಸರ್ಕಾರವು ಗಂಭೀರವಾಗಿದೆಯೇ?*
*ನಗದುರಹಿತ (cashless) ಆರ್ಥಿಕತೆಯ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ (ಬಿಜೆಪಿ ಮಾತ್ರವಲ್ಲಾ, ಎಲ್ಲಾ ಪಕ್ಷಗಳ) ವಂತಿಗೆಯನ್ನು ನಗದುರಹಿತ ಮತ್ತು ಪಾರದರ್ಶಕ ಮಾಡಲು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಈಗಲಾದರೂ ಆ ನಿಟ್ಟಿನಲ್ಲಿ ಮುಂದಾಗುವರೇ?*
*ನಗದುರಹಿತ ಆರ್ಥಿಕತೆ ಯಶಸ್ವಿಯಾಗಿರುವ ದೇಶಗಳು ಯಾವುವು? ಅಲ್ಲಿ ಅಳವಡಿಸಿದ ವಿಧಾನಗಳು ಯಾವುವು? ಎಷ್ಟು ಪ್ರಮಾಣದ ನಗದುರಹಿತ ಆರ್ಥಿಕತೆ ಅಲ್ಲಿ ಸಾಧ್ಯವಾಗಿದೆ? ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಆಗಬಹುದು? ಭಾರತಕ್ಕೆ ಹೊಂದುವ ವಿಧಾನ ಯಾವುದು?*
*ಸದರಿ ಕ್ರಮದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು. ಲಾಭ ಮಾಡಿಕೊಂಡವರ ಮೇಲೆ ತೆರಿಗೆ ಹಾಕಬೇಕು. ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳ ಆಲೋಚನೆಯೇನಾದರೂ ಸರ್ಕಾರದ ಮುಂದೆ ಇದೆಯೇ?*

ಈ ಪ್ರಶ್ನೆಗಳ ಕುರಿತಾಗಿ ಚರ್ಚಿಸಿ, ದೇಶದ ಹಿತದೃಷ್ಟಿಯಿಂದ ಕಪ್ಪುಹಣದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಮುಂದಾಗುವ ಕುರಿತು ಸದರಿ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಹಾಗೆಯೇ ನಷ್ಟಕ್ಕೊಳಗಾದ ಜನವರ್ಗಗಳಿಗೆ ಪರಿಹಾರ ಕಲ್ಪಿಸುವ ಕುರಿತು ನಿರ್ಣಯ ಮಾಡಲಾಗುತ್ತದೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ನಾಡಿನ ಪ್ರಜ್ಞಾವಂತರು ಪಾಲ್ಗೊಳ್ಳಬೇಕೆಂದು ಕೋರುತ್ತೇವೆ.
ಮೇಲೆ ಹೆಸರಿಸಲಾದ ಬಿಜೆಪಿ ಮತ್ತದರ ಪರಿವಾರದ ಪ್ರತಿನಿಧಿಗಳು ಈ ಚರ್ಚೆಗೆ ಹೆದರುವುದಿಲ್ಲವೆಂದೂ, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಳ್ಳುವರೆಂದೂ ಭಾವಿಸುತ್ತೇವೆ.

ಸಂಪರ್ಕ: ನಾದ, ನಂ.366, 8ನೇ ಕ್ರಾಸ್, 8ನೇ ಮೇನ್, ಪದ್ಮನಾಭನಗರ, ಬೆಂಗಳೂರು. ಫೋ: ಡಾ.ವಾಸು-ಜನಶಕ್ತಿ 9945516267, ಗುರುಪ್ರಸಾದ್ ಕೆರಗೋಡು-ದಸಂಸ 8095234299, ರಾಜಶೇಖರ್ ಅಕ್ಕಿ-ಸ್ವರಾಜ್ ಅಭಿಯಾನ 8951811745, ಜೆ.ಎಂ.ವೀರಸಂಗಯ್ಯ-ರೈತಸಂಘ 9342658829.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s