ಪಾರದರ್ಶಕತೆಯೋ ತೆರೆಮರೆಯ ನಾಟಕ ಪ್ರಹಸನವೋ ?

ನೋಟು ರದ್ದತಿ ಮೂಲಕ ಕಪ್ಪು ಹಣ ಹಿಡಿದು ಹಾಕಿದ್ದೇನೂ ಇಲ್ಲ, ವಾಸ್ತವದಲ್ಲಿ ಕಾರ್ಪೋರೇಟ್ ಕಂಪೆನಿಗಳಿಗೇ ಅದರಿಂದ ಅನುಕೂಲವಾಯಿತು ಎಂಬುದೀಗ ಹಳೆಯ ಸುದ್ದಿ. ಈಗ ಮೋದಿ ಭಕ್ತ ಮಂಡಳಿಯಿಂದ.ಹೊಸದೊಂದು ನಾಟಕ ಶುರುವಾಗಿದೆ. ಅದು ಚುನಾವಣಾ ಸುಧಾರಣೆಗಳು. ಆದರೆ ವಾಸ್ತವವೇನು? ಒಂದು ಬಹುಮುಖ್ಯ ಲೇಖನವನ್ನು ಹಿರಿಯ ಲೇಖಕ ನಾ.ದಿವಾಕರ್ ಅವರು ಅನುವಾದ ಮಾಡಿದ್ದಾರೆ. ದಯವಿಟ್ಟು ಓದಿ.

ಪಾರದರ್ಶಕತೆಯೋ ತೆರೆಮರೆಯ ನಾಟಕ ಪ್ರಹಸನವೋ ?
ನಾ ದಿವಾಕರ
(ಮೂಲ ಲೇಖಕ : ರೋಹನ್ ವೆಂಕಟರಾಮಕೃಷ್ಣನ್)

2016ರಲ್ಲಿ ಚುನಾವಣಾ ಸುಧಾರಣೆ ಮತ್ತು ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆಯನ್ನು ನಿಯಂತ್ರಿಸುವ ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬಜೆಟ್ ಭಾಷಣದಲ್ಲಿ, ಚುನಾವಣಾ ನಿಧಿ ಸಂಗ್ರಹಣೆಯನ್ನು ಪಾರದರ್ಶಕವನ್ನಾಗಿ ಮಾಡುವ ಹಲವು ಪ್ರಸ್ತಾವನೆಗಳನ್ನು ಮಂಡಿಸಿದ್ದರು. ದೇಶದ ಅಟೋರ್ನಿ ಜನರಲ್ ಮುಕುಲ್ ರಷ್ಟೋಗಿ ಹೇಳುವಂತೆ ಮೋದಿ ಅಥವಾ ಅವರ ಸರ್ಕಾರ ಯಾವುದೇ ಯೋಜನೆ ಅಥವಾ ನೀತಿಯ ಘೋಷಣೆಯನ್ನು ಮಾಡಿದರೂ ಯೋಜನೆಗಳ ಸೂಕ್ಷ್ಮ ತರಂಗಗಳನ್ನು ಗ್ರಹಿಸುವುದು ಅತ್ಯವಶ್ಯ. ಅರುಣ್ ಜೇಟ್ಲಿ ಮಂಡಿಸಿದ ಚುನಾವಣಾ ಸುಧಾರಣೆಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದರೆ ಉದ್ದೇಶಿತ ಸುಧಾರಣೆಗಳ ನಂತರ ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆ ಇನ್ನೂ ಹೆಚ್ಚು ಗೋಪ್ಯವಾಗುವ ಸಾಧ್ಯತೆಗಳಿವೆ.
ತಮ್ಮ ಬಜೆಟ್ ಭಾಷಣದಲ್ಲಿ ಮೋದಿ ಚುನಾವಣಾ ನಿಧಿ ಸಂಗ್ರಹಣೆಯನ್ನು ಪಾರದರ್ಶಕವನ್ನಾಗಿ ಮಾಡಲು ಹಲವು ಮಾರ್ಗಗಳನ್ನು ಸೂಚಿಸಿದ್ದರು. ಗುರುತಿಸಲ್ಪಡದ ದೇಣಿಗೆಯ ಪ್ರಮಾಣದ ಮಟ್ಟವನ್ನು 20 ಸಾವಿರ ರೂಗಳಿಂದ ಎರಡು ಸಾವಿರ ರೂಗಳಿಗೆ ಇಳಿಸುವುದು. ಚೆಕ್ ಮೂಲಕ ಅಥವಾ ಡಿಜಿಟಲ್ ತಂತ್ರಜ್ಞಾನದ ಮೂಲಕ ಪಕ್ಷಗಳು ಎಷ್ಟೇ ಪ್ರಮಾಣದ ಹಣವನ್ನಾದರೂ ಸ್ವೀಕರಿಸಲು ಅನುಮತಿ ನೀಡುವುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ವಿತರಿಸುವ ಚುನಾವಣಾ ಬಾಂಡ್‍ಗಳನ್ನು ಬಳಸಲು ಅನುಮತಿ ನೀಡುವುದು. ಇದರಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಸುಲಭವಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಆದಾಯ ತೆರಿಗೆಯನ್ನು ಘೋಷಿಸಿ ಸೂಕ್ತ ಪ್ರಮಾಣವನ್ನು ಸಲ್ಲಿಸುವುದು. ಈ ನಾಲ್ಕು ಸಲಹೆಗಳಲ್ಲಿ ಮೊದಲನೆಯದು ಮತ್ತು ಕೊನೆಯ ಸಲಹೆ ಅರ್ಥಹೀನವಾದದ್ದು. ರಾಜಕೀಯ ಪಕ್ಷಗಳು ಪಡೆಯುವ ಒಟ್ಟು ದೇಣಿಗೆಯ ಮೇಲೆ ಯಾವುದೇ ನಿರ್ಬಂಧ ಹೇರದೆ ದೇಣಿಗೆಯ ಪ್ರಮಾಣವನ್ನು 20 ಸಾವಿರದಿಂದ ಎರಡು ಸಾವಿರ ರೂಗಳಿಗೆ ಇಳಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಘೋಷಣಾ ಪ್ರಮಾಣ ಪತ್ರದಲ್ಲಿ ಅದೇ ರೀತಿ ಪ್ರಮಾಣ ಮಾಡುತ್ತವೆಯೇ ಹೊರತು, ಬೃಹತ್ ಮೊತ್ತ ಸ್ವೀಕರಿಸುವುದನ್ನು ನಿಲ್ಲಿಸುವುದಿಲ್ಲ. ಹಾಗೆಯೇ ರಾಜಕೀಯ ಪಕ್ಷಗಳು ಯಾವುದೇ ತೆರಿಗೆಗೆ ಒಳಪಡುವುದಿಲ್ಲವಾದರೂ ಕಡ್ಡಾಯವಾಗಿ ಆದಾಯ ತೆರಿಗೆ ದಾಖಲೆಗಳನ್ನು ಸಲ್ಲಿಸಲೇಬೇಕು. ಇನ್ನೆರಡು ಸಲಹೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉದ್ದೇಶಿತ ಚುನಾವಣಾ ಸುಧಾರಣಾ ಕ್ರಮಗಳು ಈಗಿರುವ ಪಾರದರ್ಶಕತೆಯನ್ನೂ ಮಸುಕು ಮಾಡುವಂತೆ ತೋರುತ್ತದೆ.
ಕಾರ್ಪೋರೇಟ್ ದೇಣಿಗೆ : ರಾಜಕೀಯ ಪಕ್ಷಗಳು ಚೆಕ್ಕುಗಳ ಮೂಲಕ, ಡಿಜಿಟಲ್ ತಂತ್ರಜ್ಞಾನದ ಮೂಲಕ ದೇಣಿಗೆ ಪಡೆಯುವ ಪ್ರಶ್ನೆ ಎದುರಾದಾಗ , ಬಿಜೆಪಿ ಇತರ ಎಲ್ಲ ರಾಜಕೀಯ ಪಕ್ಷಗಳಂತೆಯೇ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲು ತನ್ನ ವಿರೋಧ ವ್ಯಕ್ತಪಡಿಸುತ್ತಿದೆ. ಹಾಗಾಗಿ ಒಂದು ವೇಳೆ ಎಲ್ಲ ರಾಜಕೀಯ ಪಕ್ಷಗಳೂ ತಮಗೆ ಚೆಕ್ ಅಥವಾ ತಂತ್ರಜ್ಞಾನದ ಮೂಲಕ ದೇಣಿಗೆ ನೀಡುವ ವ್ಯಕ್ತಿ, ಸಂಸ್ಥೆ, ಉದ್ಯಮಿಗಳ ವಿವರಗಳನ್ನು ನೀಡಿದರೂ ಈ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುತ್ತದೆಯೇ ಎನ್ನುವುದು ಅನುಮಾನಾಸ್ಪದ ವಿಚಾರ. ಇದನ್ನು ನ್ಯಾಯಾಲಯಗಳೇ ನಿರ್ಧರಿಸಬೇಕಾಗುತ್ತದೆ. ಈಗ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು 2017ರ ಹಣಕಾಸು ಮಸೂದೆಗೆ ಒಂದು ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯ ಮೂಲಕ ಕಂಪನೀಸ್ ಕಾಯ್ದೆಯ ನಿಯಮವನ್ನು ಬದಲಾವಣೆ ಮಾಡಲಾಗಿದ್ದು ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಮೇಲಿನ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಕಂಪನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡುತ್ತಿವೆ ಎಂದು ಸಾರ್ವಜನಿಕರಿಗೆ ತಿಳಿಸುವ ಅಗತ್ಯವೂ ಇಲ್ಲ ಎಂದು ತಿದ್ದುಪಡಿಯಲ್ಲಿ ನಮೂದಿಸಲಾಗಿದೆ. ಈಗಿನ ನಿಯಮಗಳ ಹಿನ್ನೆಲೆಯಲ್ಲಿ ಉದಾಹರಣೆಗೆ ಹೇಳುವುದಾದರೆ ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಶೇ 7.5ರಷ್ಟನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲು ಇಚ್ಚಿಸುತ್ತದೆ ಎಂದಿಟ್ಟುಕೊಳ್ಳೋಣ. ಈ ಮೊತ್ತವನ್ನು ಕಂಪನಿ ತನ್ನ ಲಾಭ ನಷ್ಟ ಲೆಕ್ಕಪತ್ರದಲ್ಲಿ ತೋರಿಸುವುದು ಅತ್ಯಗತ್ಯ. ಯಾವ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ ಎಂದೂ ನಮೂದಿಸಬೇಕಾಗುತ್ತದೆ. ಆದರೆ 2017ರ ಹಣಕಾಸು ಮಸೂದೆಯಲ್ಲಿ ಅಳವಡಿಸಲಾಗಿರುವ ತಿದ್ದುಪಡಿಯ ಅನ್ವಯ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ನಿಗದಿಪಡಿಸಿರುವ ಗರಿಷ್ಠ ಶೇ 7.5ರ ಮಿತಿಯನ್ನು ತೆಗೆದುಹಾಕಲಾಗಿದೆ. ಮತ್ತು ಕಂಪನಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂದು ಘೋಷಿಸಬೇಕಾದ ನಿಯಮವನ್ನೂ ತೆಗೆದುಹಾಕಲಾಗಿದೆ. ಅರ್ಥಾತ್, ಒಂದು ನಿಗದಿತ ಮಿತಿಯೊಳಗೆ ದೇಣಿಗೆ ನೀಡಿ ಪಕ್ಷಗಳ ಹೆಸರನ್ನು ಘೋಷಿಸಬೇಕಿದ್ದ ಕಂಪನಿಗಳಿಗೆ ಇನ್ನು ಮುಂದೆ ಈ ತಲೆಬೇನೆ ಇರುವುದಿಲ್ಲ. ಹೇಗಿದೆ !!!!
ಚುನಾವಣಾ ಬಾಂಡ್‍ಗಳು: ತಮ್ಮ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಚುನಾವಣಾ ಬಾಂಡ್‍ಗಳನ್ನು ವಿತರಿಸುವುದಾಗಿ ಘೋಷಿಸಿದ್ದರು. ನಂತರ ಹಣಕಾಸು ಮಸೂದೆಯಲ್ಲಿ ಇದರ ವಿವರಗಳನ್ನು ನೀಡಿದ್ದರು. ಸರಳವಾಗಿ ಹೇಳುವುದಾದರೆ ಚುನಾವಣಾ ಬಾಂಡ್‍ಗಳು ಪ್ರಾಮಿಸರಿ ನೋಟುಗಳಂತೆ ಅಥವಾ ಯಾವುದೇ ಹಣಕಾಸು ಸಾಧನವಿದ್ದಂತೆ. ಈ ಬಾಂಡ್‍ಗಳನ್ನು ನಿಗದಿತ ಬ್ಯಾಂಕುಗಳಿಂದ ಯಾರು ಬೇಕಾದರೂ ಖರೀದಿಸಬಹುದು. ನಂತರ ತಮಗಿಷ್ಟ ಬಂದ ಪಕ್ಷದ ಖಾತೆಗೆ ವರ್ಗಾಯಿಸಬಹುದು. ಈ ಕ್ರಮದಿಂದ ಚುನಾವಣಾ ನಿಧಿ ಸಂಗ್ರಹ ಹೇಗೆ ನಿರ್ಬಂಧಕ್ಕೊಳಗಾಗುತ್ತದೆ ? ನಗದು ರೂಪದಲ್ಲಿ ನೀಡುವುದನ್ನು ಬಾಂಡ್ ರೂಪದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಬ್ಯಾಂಕುಗಳು ಈ ಬಾಂಡ್‍ಗಳನ್ನು ವಿತರಿಸುವಾಗ ಕಪ್ಪುಹಣವನ್ನು ಪರಿವರ್ತಿಸುವ ಪ್ರಕ್ರಿಯೆಗೆ ಕಡಿವಾಣ ಹಾಕುತ್ತವೆ ಎಂದು ಸರ್ಕಾರದ ಭಾವಿಸುತ್ತದೆ. ಇಲ್ಲಿ ಒಂದು ಸೂಕ್ಷ್ಮ ಇದೆ. ಹಣಕಾಸು ಮಸೂದೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದೆ. ಈ ಕಾಯ್ದೆಯೇ ಭಾರತದ ಚುನಾವಣೆಗಳನ್ನು ನಿಯಂತ್ರಿಸುತ್ತದೆ. ಈ ತಿದ್ದುಪಡಿಯ ಮೂಲಕ ಬಾಂಡ್‍ಗಳನ್ನು ಒದಗಿಸುವವರ ಹೆಸರನ್ನು ಗೋಪ್ಯವಾಗಿರಿಸಲು ಅನುಕೂಲ ಮಾಡಲಾಗುತ್ತಿದೆ. ಬಾಂಡ್‍ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ತಮ್ಮನ್ನು ಎಲ್ಲಿಯೂ ಗುರುತಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ಬಗ್ಗೆ ಜೇಟ್ಲಿ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ – “ ಪ್ರತಿಯೊಂದು ರಾಜಕೀಯ ಪಕ್ಷವೂ ತಮ್ಮ ಪಕ್ಷದ ಬ್ಯಾಂಕ್ ಖಾತೆಯ ವಿವರಗಳನ್ನು, ಒಂದು ಖಾತೆಯ ಸಂಖ್ಯೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಈ ಬಾಂಡ್‍ಗಳನ್ನು ಕಡಿಮೆ ಅವಧಿಯಲ್ಲಿ ಈ ನಮೂದಿತ ಖಾತೆಯ ಮೂಲಕವೇ ನಗದೀಕರಿಸಬಹುದು. ದೇಣಿಗೆದಾರರನ್ನು ಅನಾಮಿಕರನ್ನಾಗಿಯೇ ಇರಿಸಲು ಈ ಬಾಂಡ್‍ಗಳು ಬೇರರ್ ಬಾಂಡ್‍ಗಳಾಗಿರುತ್ತವೆ. ” ಅಂದರೆ ಬೃಹತ್ ಮೊತ್ತದ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹೊಸ ಪದ್ಧತಿಯನ್ನು ಸರ್ಕಾರ ಜಾರಿಗೊಳಿಸುತ್ತಿದ್ದು ಇದು ಸಂಪೂರ್ಣ ಗೋಪ್ಯವಾಗಿರುತ್ತದೆ.
ವಿಶೇಷ ಹಿತಾಸಕ್ತಿಗಳು : ಈ ಎರಡೂ ಕ್ರಮಗಳು ರಾಜಕೀಯ ಪಕ್ಷಗಳಿಗೆ ಅನಾಮಿಕರಿಂದ ಹೆಚ್ಚಿನ ಹಣ ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಚುನಾವಣಾ ಸುಧಾರಣೆಗಳನ್ನು ಕುರಿತು ಬೆನ್ನುತಟ್ಟಿಕೊಳ್ಳುತ್ತಿರುವುದು ಹೇಗೆ ಸಾಧ್ಯ ? ಅಮಾನ್ಯೀಕರಣದ ಸಂದರ್ಭದಲ್ಲಿ ಮೋದಿ ಸರ್ಕಾರ ಅನುಸರಿಸಿದ ತಂತ್ರವನ್ನೇ ಜೇಟ್ಲಿ ಅನುಸರಿಸುತ್ತಿದ್ದಾರೆ. ಕಪ್ಪುಹಣವನ್ನು ಸಂಗ್ರಹಿಸಲು ನಗದು ಮಾತ್ರವೇ ಮಾರ್ಗ ಹಾಗಾಗಿ ಡಿಜಿಟಲ್ ಅಥವಾ ಚೆಕ್ ಆಧಾರಿತ ವಹಿವಾಟು ಅರ್ಥವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಎಂದು ಸರ್ಕಾರ ಭಾವಿಸುತ್ತದೆ. ಇಲ್ಲಿ ಬಿಜೆಪಿ ಅನುಸರಿಸುತ್ತಿರುವ ತಂತ್ರ ಎಂದರೆ, ರಾಜಕೀಯ ಪಕ್ಷಗಳನ್ನು ಬಾಧಿಸುತ್ತಿರುವ ಕಪ್ಪುಹಣದ ಆಪಾದನೆಯಿಂದ ಪಕ್ಷಗಳನ್ನು ಮುಕ್ತಗೊಳಿಸುವುದು ಮತ್ತು ಕಾರ್ಪೋರೇಟ್ ಉದ್ಯಮಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಬೃಹತ್ ಪ್ರಮಾಣದ ಹಣ ಸಂಗ್ರಹಣೆಗೆ ಅನುಕೂಲ ಮಾಡಿಕೊಡುವುದು.
ಕಳೆದ ವರ್ಷ ಬಿಜೆಪಿ ಹಣಕಾಸು ಮಸೂದೆಯನ್ನು ಬಳಸಿಕೊಂಡು ರಾಜಕೀಯ ಪಕ್ಷಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿತ್ತು. ಈ ಕ್ರಮವನ್ನು ಜಾರಿಗೊಳಿಸಿದ್ದೇ ಅಲ್ಲದೆ ಆದೇಶಕ್ಕೂ ಮುನ್ನ ಸ್ವೀಕರಿಸಿದ ಹಣವನ್ನೂ ಮಾನ್ಯ ಮಾಡಿತ್ತು. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಕ್ರಮ ವಿದೇಶಿ ಹಣ ಗಳಿಸಿವೆ ಎಂಬ ಆರೋಪದಿಂದ ಮುಕ್ತವಾಗಿದ್ದವು. ಚುನಾವಣಾ ಬಾಂಡ್‍ಗಳ ಬಳಕೆ ಮತ್ತು ಕಂಪನಿಗಳು ದೇಣಿಗೆ ಘೋಷಣೆಯಿಂದ ರಿಯಾಯಿತಿ ಪಡೆದಿರುವುದು ಭಾರತದ ರಾಜಕಾರಣವನ್ನು ಕಾಡುತ್ತಿರುವ ಕಪ್ಪುಹಣದ ಸಮಸ್ಯೆ ನೀಗಬಹುದು. ಆದರೆ ಅಮೆರಿಕದ ವಿಶೇಷ ಹಿತಾಸಕ್ತಿಗಳು ಯಾರಿಗೂ ತಿಳಿಸದೆಯೇ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಹಣ ನೀಡಲು ಇದು ಅವಕಾಶ ಒದಗಿಸುತ್ತದೆ. ಸಹಜವಾಗಿಯೇ ಅತಿ ದೊಡ್ಡ ಪಕ್ಷವೇ ಇದರ ಅತಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಕಾಪೋರೇಟ್ ಉದ್ಯಮಿಗಳೊಡನೆ ನಿಕಟ ಸಂಪರ್ಕ ಹೊಂದಿರುವ ಪಕ್ಷ, ವಿದೇಶಗಳಲ್ಲಿ ಹೆಚ್ಚಿನ ಜನಬೆಂಬಲ ಹೊಂದಿರುವ ಪಕ್ಷ, ನಗದು ದೇಣಿಗೆಯ ಮೇಲೆ ಕಡಿಮೆ ಅವಲಂಬಿತವಾಗಿರುವ ಪಕ್ಷ ಲಾಭ ಪಡೆಯಲು ಸಾಧ್ಯ.
ಅಂತಹ ಪಕ್ಷ ಯಾವುದೆಂದು ಹೇಳಬೇಕಿಲ್ಲ.!!!!

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s