ಪಾರದರ್ಶಕತೆಯೋ ತೆರೆಮರೆಯ ನಾಟಕ ಪ್ರಹಸನವೋ ?

ನೋಟು ರದ್ದತಿ ಮೂಲಕ ಕಪ್ಪು ಹಣ ಹಿಡಿದು ಹಾಕಿದ್ದೇನೂ ಇಲ್ಲ, ವಾಸ್ತವದಲ್ಲಿ ಕಾರ್ಪೋರೇಟ್ ಕಂಪೆನಿಗಳಿಗೇ ಅದರಿಂದ ಅನುಕೂಲವಾಯಿತು ಎಂಬುದೀಗ ಹಳೆಯ ಸುದ್ದಿ. ಈಗ ಮೋದಿ ಭಕ್ತ ಮಂಡಳಿಯಿಂದ.ಹೊಸದೊಂದು ನಾಟಕ ಶುರುವಾಗಿದೆ. ಅದು ಚುನಾವಣಾ ಸುಧಾರಣೆಗಳು. ಆದರೆ ವಾಸ್ತವವೇನು? ಒಂದು ಬಹುಮುಖ್ಯ ಲೇಖನವನ್ನು ಹಿರಿಯ ಲೇಖಕ ನಾ.ದಿವಾಕರ್ ಅವರು ಅನುವಾದ ಮಾಡಿದ್ದಾರೆ. ದಯವಿಟ್ಟು ಓದಿ.

ಪಾರದರ್ಶಕತೆಯೋ ತೆರೆಮರೆಯ ನಾಟಕ ಪ್ರಹಸನವೋ ?
ನಾ ದಿವಾಕರ
(ಮೂಲ ಲೇಖಕ : ರೋಹನ್ ವೆಂಕಟರಾಮಕೃಷ್ಣನ್)

2016ರಲ್ಲಿ ಚುನಾವಣಾ ಸುಧಾರಣೆ ಮತ್ತು ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆಯನ್ನು ನಿಯಂತ್ರಿಸುವ ಪ್ರಸ್ತಾಪ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಎಲ್ಲರನ್ನೂ ಚಕಿತಗೊಳಿಸಿದ್ದರು. ಹಣಕಾಸು ಸಚಿವ ಅರುಣ್ ಜೇಟ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬಜೆಟ್ ಭಾಷಣದಲ್ಲಿ, ಚುನಾವಣಾ ನಿಧಿ ಸಂಗ್ರಹಣೆಯನ್ನು ಪಾರದರ್ಶಕವನ್ನಾಗಿ ಮಾಡುವ ಹಲವು ಪ್ರಸ್ತಾವನೆಗಳನ್ನು ಮಂಡಿಸಿದ್ದರು. ದೇಶದ ಅಟೋರ್ನಿ ಜನರಲ್ ಮುಕುಲ್ ರಷ್ಟೋಗಿ ಹೇಳುವಂತೆ ಮೋದಿ ಅಥವಾ ಅವರ ಸರ್ಕಾರ ಯಾವುದೇ ಯೋಜನೆ ಅಥವಾ ನೀತಿಯ ಘೋಷಣೆಯನ್ನು ಮಾಡಿದರೂ ಯೋಜನೆಗಳ ಸೂಕ್ಷ್ಮ ತರಂಗಗಳನ್ನು ಗ್ರಹಿಸುವುದು ಅತ್ಯವಶ್ಯ. ಅರುಣ್ ಜೇಟ್ಲಿ ಮಂಡಿಸಿದ ಚುನಾವಣಾ ಸುಧಾರಣೆಗಳನ್ನು ಸವಿಸ್ತಾರವಾಗಿ ಅಧ್ಯಯನ ಮಾಡಿದರೆ ಉದ್ದೇಶಿತ ಸುಧಾರಣೆಗಳ ನಂತರ ರಾಜಕೀಯ ಪಕ್ಷಗಳ ನಿಧಿ ಸಂಗ್ರಹಣೆ ಇನ್ನೂ ಹೆಚ್ಚು ಗೋಪ್ಯವಾಗುವ ಸಾಧ್ಯತೆಗಳಿವೆ.
ತಮ್ಮ ಬಜೆಟ್ ಭಾಷಣದಲ್ಲಿ ಮೋದಿ ಚುನಾವಣಾ ನಿಧಿ ಸಂಗ್ರಹಣೆಯನ್ನು ಪಾರದರ್ಶಕವನ್ನಾಗಿ ಮಾಡಲು ಹಲವು ಮಾರ್ಗಗಳನ್ನು ಸೂಚಿಸಿದ್ದರು. ಗುರುತಿಸಲ್ಪಡದ ದೇಣಿಗೆಯ ಪ್ರಮಾಣದ ಮಟ್ಟವನ್ನು 20 ಸಾವಿರ ರೂಗಳಿಂದ ಎರಡು ಸಾವಿರ ರೂಗಳಿಗೆ ಇಳಿಸುವುದು. ಚೆಕ್ ಮೂಲಕ ಅಥವಾ ಡಿಜಿಟಲ್ ತಂತ್ರಜ್ಞಾನದ ಮೂಲಕ ಪಕ್ಷಗಳು ಎಷ್ಟೇ ಪ್ರಮಾಣದ ಹಣವನ್ನಾದರೂ ಸ್ವೀಕರಿಸಲು ಅನುಮತಿ ನೀಡುವುದು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯ ವಿತರಿಸುವ ಚುನಾವಣಾ ಬಾಂಡ್‍ಗಳನ್ನು ಬಳಸಲು ಅನುಮತಿ ನೀಡುವುದು. ಇದರಿಂದ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವುದು ಸುಲಭವಾಗುತ್ತದೆ. ಎಲ್ಲ ರಾಜಕೀಯ ಪಕ್ಷಗಳು ತಮ್ಮ ಆದಾಯ ತೆರಿಗೆಯನ್ನು ಘೋಷಿಸಿ ಸೂಕ್ತ ಪ್ರಮಾಣವನ್ನು ಸಲ್ಲಿಸುವುದು. ಈ ನಾಲ್ಕು ಸಲಹೆಗಳಲ್ಲಿ ಮೊದಲನೆಯದು ಮತ್ತು ಕೊನೆಯ ಸಲಹೆ ಅರ್ಥಹೀನವಾದದ್ದು. ರಾಜಕೀಯ ಪಕ್ಷಗಳು ಪಡೆಯುವ ಒಟ್ಟು ದೇಣಿಗೆಯ ಮೇಲೆ ಯಾವುದೇ ನಿರ್ಬಂಧ ಹೇರದೆ ದೇಣಿಗೆಯ ಪ್ರಮಾಣವನ್ನು 20 ಸಾವಿರದಿಂದ ಎರಡು ಸಾವಿರ ರೂಗಳಿಗೆ ಇಳಿಸಿದರೆ, ರಾಜಕೀಯ ಪಕ್ಷಗಳು ತಮ್ಮ ಘೋಷಣಾ ಪ್ರಮಾಣ ಪತ್ರದಲ್ಲಿ ಅದೇ ರೀತಿ ಪ್ರಮಾಣ ಮಾಡುತ್ತವೆಯೇ ಹೊರತು, ಬೃಹತ್ ಮೊತ್ತ ಸ್ವೀಕರಿಸುವುದನ್ನು ನಿಲ್ಲಿಸುವುದಿಲ್ಲ. ಹಾಗೆಯೇ ರಾಜಕೀಯ ಪಕ್ಷಗಳು ಯಾವುದೇ ತೆರಿಗೆಗೆ ಒಳಪಡುವುದಿಲ್ಲವಾದರೂ ಕಡ್ಡಾಯವಾಗಿ ಆದಾಯ ತೆರಿಗೆ ದಾಖಲೆಗಳನ್ನು ಸಲ್ಲಿಸಲೇಬೇಕು. ಇನ್ನೆರಡು ಸಲಹೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಉದ್ದೇಶಿತ ಚುನಾವಣಾ ಸುಧಾರಣಾ ಕ್ರಮಗಳು ಈಗಿರುವ ಪಾರದರ್ಶಕತೆಯನ್ನೂ ಮಸುಕು ಮಾಡುವಂತೆ ತೋರುತ್ತದೆ.
ಕಾರ್ಪೋರೇಟ್ ದೇಣಿಗೆ : ರಾಜಕೀಯ ಪಕ್ಷಗಳು ಚೆಕ್ಕುಗಳ ಮೂಲಕ, ಡಿಜಿಟಲ್ ತಂತ್ರಜ್ಞಾನದ ಮೂಲಕ ದೇಣಿಗೆ ಪಡೆಯುವ ಪ್ರಶ್ನೆ ಎದುರಾದಾಗ , ಬಿಜೆಪಿ ಇತರ ಎಲ್ಲ ರಾಜಕೀಯ ಪಕ್ಷಗಳಂತೆಯೇ ರಾಜಕೀಯ ಪಕ್ಷಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಲು ತನ್ನ ವಿರೋಧ ವ್ಯಕ್ತಪಡಿಸುತ್ತಿದೆ. ಹಾಗಾಗಿ ಒಂದು ವೇಳೆ ಎಲ್ಲ ರಾಜಕೀಯ ಪಕ್ಷಗಳೂ ತಮಗೆ ಚೆಕ್ ಅಥವಾ ತಂತ್ರಜ್ಞಾನದ ಮೂಲಕ ದೇಣಿಗೆ ನೀಡುವ ವ್ಯಕ್ತಿ, ಸಂಸ್ಥೆ, ಉದ್ಯಮಿಗಳ ವಿವರಗಳನ್ನು ನೀಡಿದರೂ ಈ ವಿವರಗಳು ಸಾರ್ವಜನಿಕರಿಗೆ ಲಭ್ಯವಾಗುತ್ತದೆಯೇ ಎನ್ನುವುದು ಅನುಮಾನಾಸ್ಪದ ವಿಚಾರ. ಇದನ್ನು ನ್ಯಾಯಾಲಯಗಳೇ ನಿರ್ಧರಿಸಬೇಕಾಗುತ್ತದೆ. ಈಗ ಬಿಜೆಪಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು 2017ರ ಹಣಕಾಸು ಮಸೂದೆಗೆ ಒಂದು ತಿದ್ದುಪಡಿ ಮಾಡಿದೆ. ಈ ತಿದ್ದುಪಡಿಯ ಮೂಲಕ ಕಂಪನೀಸ್ ಕಾಯ್ದೆಯ ನಿಯಮವನ್ನು ಬದಲಾವಣೆ ಮಾಡಲಾಗಿದ್ದು ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯ ಮೇಲಿನ ಗರಿಷ್ಠ ಮಿತಿಯನ್ನು ತೆಗೆದುಹಾಕಲಾಗಿದೆ. ಕಂಪನಿಗಳು ಯಾವ ಪಕ್ಷಗಳಿಗೆ ದೇಣಿಗೆ ನೀಡುತ್ತಿವೆ ಎಂದು ಸಾರ್ವಜನಿಕರಿಗೆ ತಿಳಿಸುವ ಅಗತ್ಯವೂ ಇಲ್ಲ ಎಂದು ತಿದ್ದುಪಡಿಯಲ್ಲಿ ನಮೂದಿಸಲಾಗಿದೆ. ಈಗಿನ ನಿಯಮಗಳ ಹಿನ್ನೆಲೆಯಲ್ಲಿ ಉದಾಹರಣೆಗೆ ಹೇಳುವುದಾದರೆ ಒಂದು ಕಂಪನಿ ತನ್ನ ಕಳೆದ ಮೂರು ವರ್ಷಗಳ ಸರಾಸರಿ ನಿವ್ವಳ ಲಾಭದ ಶೇ 7.5ರಷ್ಟನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಲು ಇಚ್ಚಿಸುತ್ತದೆ ಎಂದಿಟ್ಟುಕೊಳ್ಳೋಣ. ಈ ಮೊತ್ತವನ್ನು ಕಂಪನಿ ತನ್ನ ಲಾಭ ನಷ್ಟ ಲೆಕ್ಕಪತ್ರದಲ್ಲಿ ತೋರಿಸುವುದು ಅತ್ಯಗತ್ಯ. ಯಾವ ಪಕ್ಷಗಳಿಗೆ ದೇಣಿಗೆ ನೀಡಲಾಗಿದೆ ಎಂದೂ ನಮೂದಿಸಬೇಕಾಗುತ್ತದೆ. ಆದರೆ 2017ರ ಹಣಕಾಸು ಮಸೂದೆಯಲ್ಲಿ ಅಳವಡಿಸಲಾಗಿರುವ ತಿದ್ದುಪಡಿಯ ಅನ್ವಯ ಕಂಪನಿಗಳು ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಗೆ ನಿಗದಿಪಡಿಸಿರುವ ಗರಿಷ್ಠ ಶೇ 7.5ರ ಮಿತಿಯನ್ನು ತೆಗೆದುಹಾಕಲಾಗಿದೆ. ಮತ್ತು ಕಂಪನಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂದು ಘೋಷಿಸಬೇಕಾದ ನಿಯಮವನ್ನೂ ತೆಗೆದುಹಾಕಲಾಗಿದೆ. ಅರ್ಥಾತ್, ಒಂದು ನಿಗದಿತ ಮಿತಿಯೊಳಗೆ ದೇಣಿಗೆ ನೀಡಿ ಪಕ್ಷಗಳ ಹೆಸರನ್ನು ಘೋಷಿಸಬೇಕಿದ್ದ ಕಂಪನಿಗಳಿಗೆ ಇನ್ನು ಮುಂದೆ ಈ ತಲೆಬೇನೆ ಇರುವುದಿಲ್ಲ. ಹೇಗಿದೆ !!!!
ಚುನಾವಣಾ ಬಾಂಡ್‍ಗಳು: ತಮ್ಮ ಬಜೆಟ್‍ನಲ್ಲಿ ಅರುಣ್ ಜೇಟ್ಲಿ ಚುನಾವಣಾ ಬಾಂಡ್‍ಗಳನ್ನು ವಿತರಿಸುವುದಾಗಿ ಘೋಷಿಸಿದ್ದರು. ನಂತರ ಹಣಕಾಸು ಮಸೂದೆಯಲ್ಲಿ ಇದರ ವಿವರಗಳನ್ನು ನೀಡಿದ್ದರು. ಸರಳವಾಗಿ ಹೇಳುವುದಾದರೆ ಚುನಾವಣಾ ಬಾಂಡ್‍ಗಳು ಪ್ರಾಮಿಸರಿ ನೋಟುಗಳಂತೆ ಅಥವಾ ಯಾವುದೇ ಹಣಕಾಸು ಸಾಧನವಿದ್ದಂತೆ. ಈ ಬಾಂಡ್‍ಗಳನ್ನು ನಿಗದಿತ ಬ್ಯಾಂಕುಗಳಿಂದ ಯಾರು ಬೇಕಾದರೂ ಖರೀದಿಸಬಹುದು. ನಂತರ ತಮಗಿಷ್ಟ ಬಂದ ಪಕ್ಷದ ಖಾತೆಗೆ ವರ್ಗಾಯಿಸಬಹುದು. ಈ ಕ್ರಮದಿಂದ ಚುನಾವಣಾ ನಿಧಿ ಸಂಗ್ರಹ ಹೇಗೆ ನಿರ್ಬಂಧಕ್ಕೊಳಗಾಗುತ್ತದೆ ? ನಗದು ರೂಪದಲ್ಲಿ ನೀಡುವುದನ್ನು ಬಾಂಡ್ ರೂಪದಲ್ಲಿ ರಾಜಕೀಯ ಪಕ್ಷಗಳಿಗೆ ನೀಡಲಾಗುತ್ತದೆ. ಬ್ಯಾಂಕುಗಳು ಈ ಬಾಂಡ್‍ಗಳನ್ನು ವಿತರಿಸುವಾಗ ಕಪ್ಪುಹಣವನ್ನು ಪರಿವರ್ತಿಸುವ ಪ್ರಕ್ರಿಯೆಗೆ ಕಡಿವಾಣ ಹಾಕುತ್ತವೆ ಎಂದು ಸರ್ಕಾರದ ಭಾವಿಸುತ್ತದೆ. ಇಲ್ಲಿ ಒಂದು ಸೂಕ್ಷ್ಮ ಇದೆ. ಹಣಕಾಸು ಮಸೂದೆ ಪ್ರಜಾ ಪ್ರಾತಿನಿಧ್ಯ ಕಾಯ್ದೆಯನ್ನು ತಿದ್ದುಪಡಿ ಮಾಡುತ್ತಿದೆ. ಈ ಕಾಯ್ದೆಯೇ ಭಾರತದ ಚುನಾವಣೆಗಳನ್ನು ನಿಯಂತ್ರಿಸುತ್ತದೆ. ಈ ತಿದ್ದುಪಡಿಯ ಮೂಲಕ ಬಾಂಡ್‍ಗಳನ್ನು ಒದಗಿಸುವವರ ಹೆಸರನ್ನು ಗೋಪ್ಯವಾಗಿರಿಸಲು ಅನುಕೂಲ ಮಾಡಲಾಗುತ್ತಿದೆ. ಬಾಂಡ್‍ಗಳ ಮೂಲಕ ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವವರು ತಮ್ಮನ್ನು ಎಲ್ಲಿಯೂ ಗುರುತಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಈ ಬಗ್ಗೆ ಜೇಟ್ಲಿ ಸ್ಪಷ್ಟವಾಗಿ ಹೀಗೆ ಹೇಳುತ್ತಾರೆ – “ ಪ್ರತಿಯೊಂದು ರಾಜಕೀಯ ಪಕ್ಷವೂ ತಮ್ಮ ಪಕ್ಷದ ಬ್ಯಾಂಕ್ ಖಾತೆಯ ವಿವರಗಳನ್ನು, ಒಂದು ಖಾತೆಯ ಸಂಖ್ಯೆಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಈ ಬಾಂಡ್‍ಗಳನ್ನು ಕಡಿಮೆ ಅವಧಿಯಲ್ಲಿ ಈ ನಮೂದಿತ ಖಾತೆಯ ಮೂಲಕವೇ ನಗದೀಕರಿಸಬಹುದು. ದೇಣಿಗೆದಾರರನ್ನು ಅನಾಮಿಕರನ್ನಾಗಿಯೇ ಇರಿಸಲು ಈ ಬಾಂಡ್‍ಗಳು ಬೇರರ್ ಬಾಂಡ್‍ಗಳಾಗಿರುತ್ತವೆ. ” ಅಂದರೆ ಬೃಹತ್ ಮೊತ್ತದ ಹಣವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಹೊಸ ಪದ್ಧತಿಯನ್ನು ಸರ್ಕಾರ ಜಾರಿಗೊಳಿಸುತ್ತಿದ್ದು ಇದು ಸಂಪೂರ್ಣ ಗೋಪ್ಯವಾಗಿರುತ್ತದೆ.
ವಿಶೇಷ ಹಿತಾಸಕ್ತಿಗಳು : ಈ ಎರಡೂ ಕ್ರಮಗಳು ರಾಜಕೀಯ ಪಕ್ಷಗಳಿಗೆ ಅನಾಮಿಕರಿಂದ ಹೆಚ್ಚಿನ ಹಣ ಸಂಗ್ರಹಿಸಲು ಅನುಕೂಲ ಮಾಡಿಕೊಡುತ್ತಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಚುನಾವಣಾ ಸುಧಾರಣೆಗಳನ್ನು ಕುರಿತು ಬೆನ್ನುತಟ್ಟಿಕೊಳ್ಳುತ್ತಿರುವುದು ಹೇಗೆ ಸಾಧ್ಯ ? ಅಮಾನ್ಯೀಕರಣದ ಸಂದರ್ಭದಲ್ಲಿ ಮೋದಿ ಸರ್ಕಾರ ಅನುಸರಿಸಿದ ತಂತ್ರವನ್ನೇ ಜೇಟ್ಲಿ ಅನುಸರಿಸುತ್ತಿದ್ದಾರೆ. ಕಪ್ಪುಹಣವನ್ನು ಸಂಗ್ರಹಿಸಲು ನಗದು ಮಾತ್ರವೇ ಮಾರ್ಗ ಹಾಗಾಗಿ ಡಿಜಿಟಲ್ ಅಥವಾ ಚೆಕ್ ಆಧಾರಿತ ವಹಿವಾಟು ಅರ್ಥವ್ಯವಸ್ಥೆಯನ್ನು ಶುದ್ಧೀಕರಿಸುತ್ತದೆ ಎಂದು ಸರ್ಕಾರ ಭಾವಿಸುತ್ತದೆ. ಇಲ್ಲಿ ಬಿಜೆಪಿ ಅನುಸರಿಸುತ್ತಿರುವ ತಂತ್ರ ಎಂದರೆ, ರಾಜಕೀಯ ಪಕ್ಷಗಳನ್ನು ಬಾಧಿಸುತ್ತಿರುವ ಕಪ್ಪುಹಣದ ಆಪಾದನೆಯಿಂದ ಪಕ್ಷಗಳನ್ನು ಮುಕ್ತಗೊಳಿಸುವುದು ಮತ್ತು ಕಾರ್ಪೋರೇಟ್ ಉದ್ಯಮಿಗಳ ಮೂಲಕ ರಾಜಕೀಯ ಪಕ್ಷಗಳಿಗೆ ಬೃಹತ್ ಪ್ರಮಾಣದ ಹಣ ಸಂಗ್ರಹಣೆಗೆ ಅನುಕೂಲ ಮಾಡಿಕೊಡುವುದು.
ಕಳೆದ ವರ್ಷ ಬಿಜೆಪಿ ಹಣಕಾಸು ಮಸೂದೆಯನ್ನು ಬಳಸಿಕೊಂಡು ರಾಜಕೀಯ ಪಕ್ಷಗಳು ವಿದೇಶಿ ದೇಣಿಗೆ ಸಂಗ್ರಹಿಸಲು ಅವಕಾಶ ನೀಡಿತ್ತು. ಈ ಕ್ರಮವನ್ನು ಜಾರಿಗೊಳಿಸಿದ್ದೇ ಅಲ್ಲದೆ ಆದೇಶಕ್ಕೂ ಮುನ್ನ ಸ್ವೀಕರಿಸಿದ ಹಣವನ್ನೂ ಮಾನ್ಯ ಮಾಡಿತ್ತು. ಹಾಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಅಕ್ರಮ ವಿದೇಶಿ ಹಣ ಗಳಿಸಿವೆ ಎಂಬ ಆರೋಪದಿಂದ ಮುಕ್ತವಾಗಿದ್ದವು. ಚುನಾವಣಾ ಬಾಂಡ್‍ಗಳ ಬಳಕೆ ಮತ್ತು ಕಂಪನಿಗಳು ದೇಣಿಗೆ ಘೋಷಣೆಯಿಂದ ರಿಯಾಯಿತಿ ಪಡೆದಿರುವುದು ಭಾರತದ ರಾಜಕಾರಣವನ್ನು ಕಾಡುತ್ತಿರುವ ಕಪ್ಪುಹಣದ ಸಮಸ್ಯೆ ನೀಗಬಹುದು. ಆದರೆ ಅಮೆರಿಕದ ವಿಶೇಷ ಹಿತಾಸಕ್ತಿಗಳು ಯಾರಿಗೂ ತಿಳಿಸದೆಯೇ ರಾಜಕೀಯ ಪಕ್ಷಗಳಿಗೆ ಹೆಚ್ಚಿನ ಹಣ ನೀಡಲು ಇದು ಅವಕಾಶ ಒದಗಿಸುತ್ತದೆ. ಸಹಜವಾಗಿಯೇ ಅತಿ ದೊಡ್ಡ ಪಕ್ಷವೇ ಇದರ ಅತಿ ಹೆಚ್ಚಿನ ಲಾಭ ಗಳಿಸಲು ಸಾಧ್ಯವಾಗುತ್ತದೆ. ಕಾಪೋರೇಟ್ ಉದ್ಯಮಿಗಳೊಡನೆ ನಿಕಟ ಸಂಪರ್ಕ ಹೊಂದಿರುವ ಪಕ್ಷ, ವಿದೇಶಗಳಲ್ಲಿ ಹೆಚ್ಚಿನ ಜನಬೆಂಬಲ ಹೊಂದಿರುವ ಪಕ್ಷ, ನಗದು ದೇಣಿಗೆಯ ಮೇಲೆ ಕಡಿಮೆ ಅವಲಂಬಿತವಾಗಿರುವ ಪಕ್ಷ ಲಾಭ ಪಡೆಯಲು ಸಾಧ್ಯ.
ಅಂತಹ ಪಕ್ಷ ಯಾವುದೆಂದು ಹೇಳಬೇಕಿಲ್ಲ.!!!!

ಪ್ರೊ.ಅರುಣ್‍ಕುಮಾರ್. ಚಿಂತನಾಗೋಷ್ಠಿ .ಮೈಸೂರು. 24.02.17

‘Black economy in India’ ಎಂಬ ಮಹತ್ವಪೂರ್ಣ ಗ್ರಂಥವನ್ನು ರಚಿಸಿ, ಜಾಗೃತಿ ಮೂಡಿಸಲು ಪ್ರೊ.ಅರುಣ್‍ಕುಮಾರ್ ಅವರು ಆರಂಭಿಸಿದಾಗ, ಬಾಬಾ ರಾಮದೇವ್, ಅಣ್ಣಾ ಹಜಾರೆ, ಬಿಜೆಪಿ ಇತ್ಯಾದಿಗಳ್ಯಾರೂ ಅದರ ಬಗ್ಗೆ ಚಕಾರವೇ ಎತ್ತಿರಲಿಲ್ಲ. ಮೊದಲು ಮಾತಾಡದವರು ನಂತರ ಮಾತಾಡಬಾರದೆಂದೇನೂ ಅಲ್ಲ. ಆದರೆ, ಕಪ್ಪುಹಣದ ಮೂಲಗಳು ಯಾವುವು, ಅದನ್ನು ಹೇಗೆ ನಿಗ್ರಹಿಸಬೇಕು ಎಂಬುದನ್ನು ಸರಿಯಾಗಿ ವಿಶ್ಲೇಷಿಸದೇ, ಕೇವಲ ರಾಜಕೀಯ ಲಾಭಕ್ಕಾಗಿ ಅದರ ವಿರುದ್ಧ ಮಾತಾಡಿದಂತೆ ಮಾಡುವುದು ಮತ್ತು ನಿಜಕ್ಕೂ ಕಾಳಧನಿಕರ ಪರವೇ ನಿಂತಿರುವುದು ಅಥವಾ ಮೌನ ವಹಿಸುವುದು ಆಷಾಢಭೂತಿತನ ಆಗುತ್ತದೆ.
ಬನ್ನಿ ಪ್ರೊ.ಅರುಣ್‍ಕುಮಾರ್ ಅವರ ಚಿಂತನೆಗಳ ಮೂಲಕ ಕಪ್ಪುಹಣದ ವಿರುದ್ಧ ನಿರ್ಣಾಯಕವಾದ ಸಮರ ಸಾರೋಣ.

black_money5

ಪ್ರಶಾಂತ್ ಭೂಷಣ್ ರವರ ಮಾತುಗಳು/ Prashant Bhushan Speaks on Demonetisation

ಎಲ್ಲರಿಗೂ ನಮಸ್ಕಾರಗಳು.
ಈ ಸಮಯದ ಮುಖ್ಯ ಸಂಗತಿಗಳಲ್ಲೊಂದಾದ ನೋಟುರದ್ದತಿಯ ಬಗ್ಗೆ ನಿಮ್ಮೆದುರು ಮಾತನಾಡಬೇಕಿದೆ. ನಾನು ಕನ್ನಡದಲ್ಲಿ ಮಾತನಾಡಲಾರೆ ಕ್ಷಮಿಸಿ,
ನೋಟು ರದ್ದತಿ ಈ ದೇಶದ ಜನರ ಬದುಕು-ಅವರ ಉದ್ಯೋಗ ಹಣ ಎಲ್ಲವನ್ನೂ ಬೀದಿಗೆಸೆದಿದೆ.
ಪ್ರಧಾನಮಂತ್ರಿಗಳು ಕಪ್ಪುಹಣದ ಸಮಸ್ಯೆಯನ್ನು, ಭಯೋತ್ಪಾದನೆಯಲ್ಲಿ ಹಣದ ಹರಿವನ್ನು ಹಾಗೂ ಭ್ರಷ್ಟಾಚಾರವನ್ನು ನಿಗ್ರಹಿಸಲು ನೋಟು ರದ್ದತಿ ಮಾಡುವುದಾಗಿ ಹೇಳಿದರು. ಆದರೆ, ನಂತರದ ವಾಸ್ತವಾಂಶಗಳು ತೋರುವಂತೆ ಪ್ರಧಾನಿ 86% ನೋಟುಗಳನ್ನು ವಾಪಾಸ್ ತೆಗೆದುಕೊಂಡಾಗ ಯಾವ ಪರಿಣತರನ್ನೂ ಅಭಿಪ್ರಾಯ ಕೇಳಿರಲಿಲ್ಲ. ರಿಸರ್ವ್ ಬ್ಯಾಂಕ್‍ನ ನಿರ್ದೇಶಕ ಮಂಡಳಿಗೆ ಒಂದು ಗಂಟೆಯ ಮುಂಚೆ ವಿಷಯವನ್ನು ತಿಳಿಸಲಾಗಿತ್ತು. ಈ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಯಾವ ಜವಾಬ್ದಾರಿಯುತ ವ್ಯಕ್ತಿಗೂ ತಿಳಿಸಲಾಗಿರಲಿಲ್ಲ. ಆದರೂ ಪ್ರಧಾನಿ ನಿರ್ಧಾರ ಕೈಗೊಂಡರು.
ಖಂಡಿತವಾಗಿಯೂ ಕಪ್ಪುಹಣ ಮತ್ತು ಭ್ರಷ್ಟಾಚಾರ ಎನ್ನುವುದು ದೇಶದ ಮುಂದಿರುವ ದೊಡ್ಡ ಸಮಸ್ಯೆಗಳೇ ನಿಜ. ಆದರೆ ಅವರ ನೋಟು ರದ್ದತಿಯ ಕ್ರಮದ ಹಿಂದಿನ ಉದ್ದೇಶ ಅದೇ ಆಗಿತ್ತೆ? ಈ ಉದ್ದೇಶಗಳನ್ನು ಈಡೇರಿಸಲು ಕೈಗೊಳ್ಳಬೇಕಾಗಿದ್ದ ಕ್ರಮ ಇದೇ ಆಗಿತ್ತೇ?
ನಾನು 2014ರ ಜೂನ್‍ನಲ್ಲಿ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಒಂದು ಸುದೀರ್ಘ ಪತ್ರ ಬರೆದಿದ್ದೆ. ಅದರಲ್ಲಿ, “ನೀವು ಕಪ್ಪುಹಣದ ಸಮಸ್ಯೆ ಬಗೆಹರಿಸುವುದಾದರೆ, ಹೊರದೇಶಗಳಿಂದ ಕಪ್ಪು ಹಣ ತರುವ ಉದ್ದೇಶದಲ್ಲಿ ಗಂಭೀರವಾಗಿದ್ದಲ್ಲಿ, ಕೆಲವು ಕಾನೂನು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ” ಎಂದು ಬರೆದಿದ್ದೆ.
ಏಕೆಂದರೆ ನಮ್ಮ ದೇಶದಲ್ಲಿ ಕಪ್ಪು ಹಣ ಸೃಷ್ಟಿಯಾಗಲು ಇಲ್ಲಿರುವ ಕಾನೂನುಗಳೇ ಆವಕಾಶ ಮಾಡಿಕೊಟ್ಟಿವೆ. ನಾವು ಇದನ್ನು ಅನೈತಿಕ ಹಣ ಎಂದು ಕರೆಯೋಣ. ಕಪ್ಪು ಹಣ ಎಂದರೆ ತೆರಿಗೆ ತಪ್ಪಿಸಿರುವ ಹಣ ಅಷ್ಟೇ, ಅನೈತಿಕ ಹಣ ಎಂದರೆ ಅನೈತಿಕ ಮೂಲಗಳಿಂದ ಬಂದಿರುವುದು.
ಭಾರತದಲ್ಲಿ ಹಲವು ಲಕ್ಷ ಕೋಟಿಗಳಷ್ಟು ಹಣವನ್ನು ಪಾರ್ಟಿಸಿಪೇಟರಿ ನೋಟುಗಳು ಎಂಬ ರೂಪದಲ್ಲಿ ಹೂಡಿಕೆಯಾಗುತ್ತಿವೆ. ಇದರಲ್ಲಿ ತೊಡಗಿಸಲಾಗಿರುವ ಹಣ ಅನೈತಿಕ, ಆದರೆ ಅದು ಯಾರದ್ದು ಎಂದು ಯಾರಿಗೂ ಗೊತ್ತಾಗುವುದಿಲ್ಲ.
ಇದಕ್ಕಾಗಿಯೇ ಕಂಪೆನಿಗಳನ್ನು ಸೃಷ್ಟಿಸಲಾಗಿರುತ್ತದೆ. ‘ತೆರಿಗೆ ಕಳ್ಳರ ಸ್ವರ್ಗ’ ಎಂದು ಕರೆಯಲಾಗುವ, ಬ್ಯಾಂಕ್ ಖಾತೆದಾರರ ಹೆಸರುಗಳನ್ನು ಬಹಿರಂಗಪಡಿಸದ ಅನೇಕ ದೇಶಗಳು ವಿಶ್ವದಲ್ಲಿವೆ. ಅಲ್ಲಿ ತೆರಿಗೆಯೂ ಅತಿ ಕಡಿಮೆ. ಮೊದಲು ನಾವು ಸ್ವಿರ್ಡರ್ಲೆಂಡ್ ಬಗ್ಗೆ ಹೀಗನ್ನುತ್ತಿದ್ದೆವು. ಈಗ ಮಾರಿಶಸ್ ಪನಾಮಾ ದ್ವೀಪ ಇನ್ನೂ ಹಲವು ಇವೆ.
ಇಲ್ಲಿ ಹುಟ್ಟುಹಾಕಲಾಗುವ ಕಂಪೆನಿಗಳಿಂದ ಭಾರತೀಯರೇ ವಿದೇಶಿ ನೇರ ಹೂಡಿಕೆ ಮಾಡಲು ಸಾಧ್ಯ, ನಮ್ಮ ದೇಶದ ಒಟ್ಟು 75% ವಿದೇಶೀ ನೇರ ಹೂಡಿಕೆ ಬರುತ್ತಿರುವುದು ಇಂತಹ ದೇಶಗಳಿಂದ. ಅದರಲ್ಲಿ ಮಾರಿಶಸ್ ಒಂದರಿಂದಲೇ 65% ಬರುತ್ತಿದೆ. ಭಾರತಕ್ಕೂ ಮಾರಿಶಸ್ಸಗೂ ನಡುವೆ ಅಂತಹ ಎರಡುಪಟ್ಟು ತೆರಗೆ ತಡೆಯುವ ಒಪ್ಪಂದವೂ ಆಗಿದೆ.
ದ್ವಿಗುಣ ತೆರಿಗೆ ಪದ್ಧತಿಯಲ್ಲಿ-ಉದಾಹರಣಗೆ ಅಮೇರಿಕಾ ಅಥವಾ ಯುರೋಪಲ್ಲಿ ಒಂದು ಕಂಪೆನಿ ರೆಜಿಸ್ಟರ್ ಆದರೆ, ಅದಕ್ಕೆ ಮತ್ತು ನಂತರದ ವ್ಯಾಪಾರಕ್ಕೆ ಎರಡು ಪಟ್ಟು -ತೆರಿಗೆ ಹಾಕಲಾಗುತ್ತದೆ. ಆದರೆ ಮಾರಿಶಸ್‍ನಲ್ಲಿ ಒಂದು ಬಾರಿ ಮಾತ್ರ ತೆರಿಗೆ ವಿಧಿಸಲಾಗುತ್ತದೆ.
ಅಂದರೆ, ಮೊದಲು ಮಾರಿಶಸ್‍ನಲ್ಲಿ ಒಂದು ಅನಾಮಿಕ ಕಂಪೆನಿ ಹುಟ್ಟು ಹಾಕಿ ಅದರಲ್ಲಿ ಹೂಡಿಕೆ ಮಾಡುವುದು. ನಂತರ ಆ ಕಂಪೆನಿಯ ಮೂಲಕ ವಿದೇಶೀ ನೇರ ಹೂಡಿಕೆ ಹೆಸರಿನಲ್ಲಿ ಇಲ್ಲಿ ಹೂಡಿಕೆ ಮಾಡುವುದು. ಹೀಗೆ ಹೂಡಿಕೆ ಮಾಡಿದ ನಂತರ ಇಲ್ಲಿ ಗಳಿಸುವ ಯಾವುದೇ ಮೊತ್ತದ ಲಾಭಕ್ಕೆ ತೆರಿಗೆ ಇರುವುದಿಲ್ಲ.
ಇಂತಹ ಪಾರ್ಟಿಸಿಪೇಟರಿ ನೋಟುಗಳ ಮೂಲಕ ಅಥವಾ ಬೇನಾಮಿ ಕಂಪೆನಿಗಳ ಮೂಲಕ ಹೂಡಿಕೆಯಾಗುವ ಹಣದ ಮೂಲಕ ಹೂಡಿಕೆಯಾಗುವ ಬಂಡವಾಳ ಯಾರದ್ದು ಎಂಬ ಬಗ್ಗೆ ಭಾರತದ ಅಧಿಕಾರಿಗಳಿಗೆ ಕನಿಷ್ಟ ಮಾಹಿತಿ ಇರುವ ವ್ಯವಸ್ಥೆ ಮಾಡಿ ಎಂದೆ.
ವಿಶ್ವಸಂಸ್ಥೆಯ ಭ್ರಷ್ಟಾಚಾರ ವಿರೋಧಿ ಒಪ್ಪಂದಕ್ಕೆ ಅನೇಕ ದೇಶಗಳು ಸಹಿ ಮಾಡಿವೆ ಭಾರತವೂ ಸೇರಿ. ಇದರ ಪ್ರಕಾರ ಯಾವುದೇ ದೇಶ ತನಗೆ ಬಾಕೀದಾರರಾಗಿರುವ ತೆರಿಗೆದಾರರ ಕುರಿತು ಮಾಹಿತಿ ಕೇಳಿದರೆ ಕೊಡಲೇಬೇಕು. ಎನ್‍ಆರ್‍ಐ ಆಗಲೀ ಯಾರೇ ಆಗಲಿ, ತಮ್ಮ ಎಲ್ಲಾ ಆಸ್ತಿ ಮತ್ತು ಆದಾಯವನ್ನು ಇಲ್ಲಿ ಘೋಷಿಸಲೇಬೇಕು. ಆದರೆ, ಇದರ ಮೂಲಕ ಬಾಕಿದಾರರನ್ನು ಕಂಡು ಹಿಡಿಯುವಂತೆ ನಾನು ನೀಡಿದ ಸಲಹೆಗಳಿಗೆ, ವಿಶೇಷ ತನಿಖಾ ಸಂಸ್ಥೆ (ಎಸ್‍ಐಟಿ) ಇಂತಹದರ ಮೇಲೆ ಕಣ್ಣಿಡಬೇಕೆಂದು ನೀಡಿದ ಸಲಹೆಗಳಿಗೆ ಯಾವುದೇ ಗಮನ ನೀಡಿಲ್ಲ.
ಸಿಂಗಾಪುರದಿಂದ ಭಾರತಕ್ಕೆ ಬಂದಿರುವ ಅತಿದೊಡ್ಡಹೂಡಿಕೆ 6240 ಕೋಟಿ ಒಂದು ಪೋಸ್ಟ್ ಬಾಕ್ಸ್ (ಬೇನಾಮಿ) ಕಂಪೆನಿ ಮೂಲಕ ಬಂದಿದೆ. ಇದರ ಹೂಡಿಕೆ ಅಂಬಾನಿ ಒಡೆತನದ 4 ಕಂಪೆನಿಗಳಲ್ಲಿ ಆಗಿದೆ. ಇಷ್ಟು ಹಣ ಹೂಡಿಕೆ ಮಾಡಿರುವ ಮೂಲ ಕಂಪೆನಿ ನೂರಾರು ಕಂಪೆನಿಗಳಿರುವ ಒಂದು ಸಣ್ಣ ರೂಮಿನಲ್ಲಿದೆ. ಇದು ಅನುಮಾನಾಸ್ಪದ. ಇದರ ಬಗ್ಗೆ ತನಿಖೆ ನಡೆಸಲು ಕೋರಿ ಮೋದಿಯವರು ಪ್ರಧಾನಿಯಾದ ಕೂಡಲೇ ನಾನು ಪತ್ರ ಬರೆದೆ. ಏನೂ ಆಗಲಿಲ್ಲ.
ರಿಲಯನ್ಸ್ ಕಂಪೆನಿ ತನ್ನ ಸಾಗರೋತ್ತರ ಅನಿಲ ಉದ್ಯಮದಲ್ಲಿ ರಿಗ್ಗಿಂಗ್ ಉಪಕರಣ ತರಿಸಲು ಆಮದು ಮಾಡಿದ ವ್ಯವಹಾರದಲ್ಲಿ ಅತಿದೊಡ್ಡ ಓವರ್ ಇನ್‍ವಾಯ್ಸಿಂಗ್ ಮಾಡಿರುವುದು ಗಮನಕ್ಕೆ ಬಂದಾಗಲೂ ಏನೂ ಮಾಡಲಿಲ್ಲ.
ಈ ಮೂಲಕ ಬಂದ ಹೆಚ್ಚವರಿ 1 ಬಿಲಿಯನ್ ಡಾಲರ್ ಹಣವು ಮಾರಿಶಸ್ ದೇಶಕ್ಕೆ ಹೋಗಿ ಬಿಳಿ ಹಣವಾಗಿ ಪರಿವರ್ತನೆಯಾಗಿ ಮುಖೇಶ್ ಅಂಬಾನಿಯ ಕಂಪೆನಿಯಲ್ಲಿ ಹೂಡಿಕೆಯಾಯಿತು.
ಅದೇ ರೀತಿ ಅನಿಲ್ ಅಂಬಾನಿಯ ಎರಡು ಕಂಪೆನಿಗಳಲ್ಲೂ ಡಾಲರ್‍ಗಟ್ಟಲೆ ಹಣ ಹೂಡಿಕಯಾಯಿತು. ಇದರ ಬಗ್ಗೆ ತನಿಖಾ ಸಂಸ್ಥೆಯೂ ಅನುಮಾನ ವ್ಯಕ್ತ ಪಡಿಸಿತು. ಇದನ್ನೂ ಪ್ರಧಾನಿಯವರ ಗಮನಕ್ಕೆ ತಂದೆ. ಏನೂ ಆಗಲಿಲ್ಲ.
ಬದಲಿಗೆ ರಿಲಯನ್ಸ್ ಜಿಯೋ ಘೋಷಣೆಯಾದಾಗ, ಅದರ ಮಾಲೀಕನ ಬದಲು ಪ್ರಧಾನಿಯವರ ಮುಖ ಪ್ರದರ್ಶನವಾಗುತ್ತಿತ್ತು!
ರಕ್ಷಣಾ ಇಲಾಖೆಗೆ ಬೇಕಿದ್ದ 58000 ಕೋಟಿ ರೂಗಳ ವಿಮಾನಗಳ ಖರೀದಿ ಈ ನಡುವೆ ನಡೆಯಿತು. ಆದರೆ, ನಂತರ ಗೊತ್ತಾದಂತೆ, ಇದರಲ್ಲಿ 33000 ಕೋಟಿ ರೂಗಳಷ್ಟು ಒಪ್ಪಂದವನ್ನು ಅನಿಲ್ ಅಂಬಾನಿ 1 ವರ್ಷದ ಹಿಂದೆ ಆರಂಭಿಸಿದ ಶೂನ್ಯ ಅನುಭವದ ಒಂದು ಸಣ್ಣ ಕಂಪೆನಿಯಲ್ಲು ಹೂಡಿಕೆ ಮಾಡಲಾಗುವುದು.
ಅದೇ ರೀತಿ ಅದಾನಿ ಕಂಪೆನಿಯಲ್ಲಿ ಕಲ್ಲಿದ್ದಲಿನ ಆಮದಿನಲ್ಲಿ ಸಾವಿರಾರು ಕೋಟಿ ರೂ ಆಮದು ಓವರ್ ಇನ್‍ವಾಯ್ಸಿಂಗ್ ಮಾಡಿರುವುದು ಹೊರಬಂದಿದೆ.
ಸುಪ್ರಿಂ ಕೋರ್ಟ್‍ನ ಮತ್ತೊಂದು ತೀರ್ಪು ಹೇಳುವಂತೆ ಇದೇ ಅದಾನಿ ಕಂಪೆನಿ 1000 ಕೋಟಿ ರೂ ತೆರಿಗೆ ವಂಚನೆಯನ್ನು ವಜ್ರಾಭರಣದ ವ್ಯವಹಾರದಲ್ಲಿ ಆಗಲೇ ಮಾಡಿದೆ.
ಭಾರತದಲ್ಲಿರುವ ಉಷ್ಣವಿದ್ಯುತ್ ಕಂಪೆನಿಗಳಿಗೆ ಕ್ಲಲಿದ್ದಲು ಆಮದು ಮಾಡಲು ಆಸ್ಟ್ರೇಲಿಯಾದ ಬ್ಯಾಂಕುಗಳು 6540 ಕೋಟಿ ರೂ ಸಾಲ ಕೇಳಿದಾಗ ನೀಡಲಿಲ್ಲ. ಆದರೆ
ನಂತರ ಅವರಿಗೆ ಸಾಲದ ಜೊತೆಗೆ ಪರಿಸರ ಮಾಲಿನ್ಯ ಮಂಡಳಿತ ನಿರಾಪೇಕ್ಷಣಾ ಪತ್ರ ಹೇಗೆ ಸಿಕ್ಕಿತು?
ಈ ಎಲ್ಲಾ ಮಾಹಿತಿಯೂ ಪ್ರಧಾನಮಂತ್ರಿ ಬಳಿ ಇದ್ದರೂ ಯಾವ ಕ್ರಮವೂ ಇಲ್ಲ,
ಹಾಗೆಯೇ ದೊಡ್ಡ ಸಾಮಾಜಿಕ ಚಳವಳಿಯ ನಂತರ ಲೋಕ್‍ಪಾಲ್ ಮಸೂದೆಗೆ 2013ರಲ್ಲೇ ಸಂಸತ್ತಿನ ಅನುಮತಿ ಸಿಕ್ಕರೂ, 2014ರಲ್ಲಿ ಮೋದಿ ಬಂದು ಇಷ್ಟು ಸಮಯ ಆದರೂ, ಅದರ ಬಗ್ಗೆ ಚರ್ಚೆಯೇ ಇಲ್ಲ! ಲೋಕ್‍ಪಾಲ್‍ನ್ನು ನಿಯೋಜನೆ ಮಾಡಲು ವಿರೋಧ ಪಕ್ಷದ ನಾಯಕರ ಅನುಮತಿ ಬೇಕು, ಆದರೆ ಅಧಿಕೃತ ವಿರೋಧ ಪಕ್ಷಕ್ಕೆ ಬೇಕಿರುವಷ್ಟು ಸೀಟುಗಳಿಲ್ಲ ಎಂಬ ನೆಪ ನೀಡಲಾಗುತ್ತಿದೆ! ಈ ಪ್ರಧಾನ ಮಂತ್ರಿಯವರು ಯಾವುದಾದರೂ ಸಂಸ್ಥೆಯನ್ನು ಕೊಲ್ಲಬಯಸಿದರೆ, ಅವರು ಅದಕ್ಕೆ ಮುಖ್ಯಸ್ಥರನ್ನು ನೇಮಿಸದೇ ತಾನಾಗೇ ಸಾಯಲು ಬಿಡುತ್ತಾರೆ. ಅದೇ ಅವರ ವಿಧಾನ. ಗುಜರಾತ್‍ನ ಮುಖ್ಯಮಂತ್ರಿಯಾಗಿದ್ದಾಗ 12 ವರ್ಷ ಕೇಂಧ್ರ ವಿಚಕ್ಷಣಾ ದಳಕ್ಕೂ ಯಾರನ್ನೂ ನೇಮಕ ಮಾಡಿರಲಿಲ್ಲ. ಈಗ ಮಾಡಿರುವವರು ಅತ್ಯಂತ ಭ್ರಷ್ಟರು.
ಅದರಲ್ಲಿ ಒಬ್ಬರು ಬಿರ್ಲಾ ಸಹಾರಾ ದಾಳಿಗಳಾದಾಗ ಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಅದರಲ್ಲಿ 150 ಕೋಟಿ ಒಂದೇ ವರ್ಷದಲ್ಲಿ ಅವ್ಯವಹಾರ ಆಗಿತ್ತು. ದಾಖಲೆಗಳಲ್ಲಿ ಭ್ರಷ್ಟತೆಯನ್ನು ಸಾಬೀತುಪಡಿಸುವ ಸಕಲ ವಿವರಗಳೂ ಇದ್ದವು. ಆ ಕಂಪ್ಯೂಟರ್ ದಾಖಲೆ ತೋರಿಸುವಂತೆ, 9 ಪ್ರಕರಣಗಳಲ್ಲಿ ಅತಿಹೆಚ್ಚು ಹಣ ಪಡೆದಿದ್ದ ಹೆಸರು, ಆಗಿನ ಗುಜರಾತ್ ಮುಖ್ಯಮಂತ್ರಿ ನರ್ರೆಂದ್ರ ಮೋದಿಯವರದ್ದೇ ಆಗಿತ್ತು! ಅದರಲ್ಲಿ ಶೀಲಾ ದೀಕ್ಷಿತ್ ಮೊದಲಾದ ಎಲ್ಲರ ಹೆಸರೂ ಇದೆ. ಈ ಹಿಂದೆ ನಾನು ಹೇಳಿದ ಅಧಿಕಾರಿ, ಈ ಅವಧಿಯ ಆದಾಯ ತೆರಿಗೆ ದಾಳಿಗಳ ಮೇಲ್ವಿಚಾರಣಾ ಅಧೀಕಾರಿಯಾಗಿದ್ದರು. ಇಂತಹ ದಾಳಿಗಳಾದಾಗ ಮೇಲ್ನೋಟಕ್ಕೆ ಭ್ರಷ್ಟಾಚಾರ ಕಂಡುಬಂದರೆ ಎಫ್‍ಐಆರ್ ದಾಖಲಿಸಿ ವಿಚಾರಣೆ ಮಾಡಬೇಕು. ಆತ ಅದೆನನ್ನೂ ಮಾಡಲಿಲ್ಲ. ಅದಕ್ಕೆ ಬಹುಮಾನವಾಗಿ ಆತನಿಗೆ ಬಡ್ತಿ ನೀಡಲಾಯಿತು!
ಇಂತಹ ಅನೇಕ ಭ್ರಷ್ಟತೆಯ ಕೆಲಸಗಳಲ್ಲಿ ಶಾಮೀಲಾಗಿರುವುದು ಈ ಅಧೀಕಾರಿಯ ಹೆಚ್ಚುಗಾರಿಕೆ!
ಇನ್ನೊಬ್ಬ ಅಧೀಕಾರಿ ಬಸೀನ್ ಅವರ ಮೇಲೆ ಸಾಕ್ಷಾಥ್ ವಿಚಕ್ಷಣಾ ದಳವೇ ಆರೋಪ ಹೊರೆಸಿತ್ತು. ಈಗ ಅದರ ಮುಖ್ಯಸ್ಥ ಆತನೇ?!
ಸಿಬಿಐ ಸರದಿ-ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಸಿಬಿಐ ನಿರ್ದೇಶಕರ ನಿವೃತ್ತಿಯ 6 ತಿಂಗಳ ಮೊದಲೇ ಮುಂದಿನ ನಿರ್ದೇಶಕನ ಆಯ್ಕೆ ಆಗಬೇಕು. ಆದರೆ ಮುಖ್ಯಸ್ಥನ ನಿವೃತ್ತಿಯ ನಂತರ ಸುದೀರ್ಘ ಅನುಭವ ಹೊಂದಿದ್ದ ಆರ್.ಕೆ.ದತ್ತಾ ಎಂಬ-ಕರ್ನಾಕದಲ್ಲೂ ಗಣಿ ಹಗರಣಗಳ ಸಂದರ್ಭದಲ್ಲಿ ಸೋತೋಷ್ ಹೆಗಡೆ ಕೆಳಗೆ ಕೆಲಸ ಮಾಡಿರುವ ವ್ಯಕ್ತಿ-ನೇಮಕವಾಗಬೇಕಿತ್ತು. ಅದರ ಬದಲು ಅವರನ್ನು ವರ್ಗಾವಣೆ ಮಾಡಲಾಯಿತು, ಅವರಿಗೆ ಅನುಭವೇ ಇಲ್ಲದ ಭಯೋತ್ಪಾದನಾ ಜಾಲಕ್ಕೆ ಹಣಪೂರೈಕೆ ತಡೆಯುವ ಘಟಕಕ್ಕೆ! ಅವರ ವಿಶೇಷತೆಯಾಗಿದ್ದು ಭ್ರಷ್ಟಾಚಾರ ನಿಗ್ರಹ.
ನಾನು ಹೇಳುತ್ತಿರುವುದೇನೆಂದರೆ, ಈ ಪ್ರಧಾನ ಮಂತ್ರಿ ಈ ದೇಶದಲ್ಲಿದ್ದ ಭ್ರಷ್ಟಾಚಾರ ತಡೆಯುತ್ತಿದ್ದ ಎಲ್ಲಾ ಸಂಸ್ಥೆಗಳ ಸೊಂಟ ಮುರಿಯಲು ಎಲ್ಲಾ ಸಾಧ್ಯವಿರುವ ಕರಾಮತ್ತುಗಳನ್ನೂ ಮಾಡಿರುವ ಮನುಷ್ಯ. ಈಗ ಆತ ಕಪ್ಪುಹಣ ತಡೆಯುವ ಹೀರೋನಂತೆ ಬಿಂಬಿಸಿಕೊಳ್ಳಲು ನೋಡುತ್ತಿದ್ದಾರೆ. ನೋಟು ರದ್ದತಿ ಕಪ್ಪುಹಣದ ಮೇಲಿನ ದಾಳಿ ಎಂದು ತೋರಿಸಲು ಪ್ರಯತ್ನಿಸಲಾಗುತ್ತಿದೆ.
ಎಷ್ಟು ಕಪ್ಪು ಹಣ ಇದರಿಂದ ಬಂತು?
ಸರ್ಕಾರ ಹೇಳುತ್ತಿದೆ-ಕಾಳಧನಿಕರ ಚಾಪೆಯಡಿ ಹುದುಗಿದ್ದ ಲಕ್ಷಾಂತರ ಕೋಟಿಯನ್ನು ವಶಪಡಿಸಿಕೊಳ್ಳಲಾಗಿದೆ, ಇವೆಲ್ಲಾ ಬ್ಯಾಂಕಿಗೆ ಬರದೇ ಹೋಗುತ್ತಿದ್ದ ಹಣ ಇತ್ಯಾದಿ ಘೋಷಿಸಲಾಗುತ್ತಿದೆ.
ಆದರೆ ಇತ್ತೀಚಿನ ವರದಿಗಳಲ್ಲಿ ಕಾಣುವಂತೆ ಈಗಾಗಲೇ ಬ್ಯಾಂಕಿಗೆ ಬಂದ ಹಣ ನಿಷೇಧವಾದ ಅಷ್ಟೂ ಹಣ, ಅಥವಾ ಅದಕ್ಕಿಂತ ಹೆಚ್ಚು! ಹೊಸ ನೋಟುಗಳಲ್ಲಿ ಭ್ರಷ್ಟಾಚಾರ ತಡೆಯುವ ಯಾವುದೇ ವಿಶೇಷತೆ ಇಲ್ಲ. ಅಂದರೆ ಮೊದಲು ಕಪ್ಪುಹಣವಾಗಿ 500, 1000 ಬಳಕೆಯಾಗಿದ್ದರೆ, ಈಗ 2000ದ ನೋಟು ಬಳಕೆಯಾಘುತ್ತದೆ! ನಾನು ಕಪ್ಪು ಹಣ ಇಲ್ಲ ಅಂತ ಹೇಳುತ್ತಿಲ್ಲ ಆದರೆ ಅಂತಹವರು ಎಷ್ಟು ಚಾಣಾಕ್ಷರೆಂದರೆ, ಅವರು ತಮ್ಮ ಹಣವನ್ನು ಬದಲಿಸಿಕೊಳ್ಳಲು ಎಲ್ಲಾ ಜಾಣ ಕುತಂತ್ರಗಳನ್ನೂ ಮಾಡಿದರು.
ಈಗ ಎಲ್ಲಾ ನೋಟುಗಳೂ ಬ್ಯಾಂಕಿಗೆ ಬಂದ ನಂತರ, ನೋಟು ರದ್ದತಿಯ ಘೋಷಿತ ಉದ್ದೇಶವನ್ನೇ ಬದಲಿಸಲಾಗಿದೆ! ನೋಟುಗಳು ಚಲಾವಣೆಯಲ್ಲಿಲ್ಲದಿರುವುದರಿಂದ, ಜನರು ನಗದು ರಹಿತ ವ್ಯವಗಹಾರಕ್ಕೆ ಹೋಗುತ್ತಾರೆ, ಇದರಿಂದ ಅಭಿವೃದ್ದಿ ಎಂದು ಹೇಳಿದ್ದಾರೆ. ಈ ದೇಶದ 50% ಜನರಿಗೆ ಬ್ಯಾಂಕ್ ಖಾತೆ ಇಲ್ಲ, ದೊಡ್ಡ ಸಂಖ್ಯೆಯ ಜನರಿಗೆ ಓದು ಬರಹ ಬರುವುದಿಲ್ಲ, ಶಾಲೆಗೆ ಮಕ್ಕಳನ್ನು ಕಳಿಸಲು ಕಷ್ಟ. ಇಂತಹ ಸಂದರ್ಭದಲ್ಲಿ ಅವರು ನಗದುರಹಿತ ಚಲಾವಣೆ ಮಾಎಬೇಕೇ?
ಬಿಹಾರದಲ್ಲಿ ಒಬ್ಬ ಮಹಿಳೆ 500 ರೂಗಾಗಿ 2 ದಿನ ಕ್ಯೂ ನಲ್ಲಿ ನಿಂತಳು ಆಕೆಗೆ 2ರೂ ನಾಣ್ಯಗಳಲ್ಲಿ 500 ರೂ ಸಿಕ್ಕಿತು. ಈಗ ಮತ್ತೆ ಹೋದರೆ ಮತ್ತೆ 2000 ಮಾತ್ರ ಸಿಕ್ಕಿತು!
ಆಲ್ ಇಂಡಿಯಾ ಮ್ಯಾನುಫಾಕ್ಷರರಸ್ ಅಸೋಸೊಯೇಶನ್ ಅವರ ವರದಿಯಲ್ಲಿ, ನೋಟು ರದ್ದತಿಯ ನಂತರ ಉತ್ಪಾದನಾ ಕ್ಷೇತ್ರದಲಲಿ ಶೇ.35 ಉದ್ಯೋಗ ನಷ್ಟವಾಗಿದೆ, ಮುಂದಿನ ಕೆಲವು ತಿಂಗಳಲ್ಲಿ ಋಣಾತ್ಮಕ ಅಭಿವೃದ್ದಿ ದರಕ್ಕೆ ದೇಶ ತಲುಪುತ್ತದೆ!
ಈ ಸಂದರ್ಭಲ್ಲಿ ಹೊರಬಿದ್ದ ಒಂದು ವಿಡಿಯೋದಲ್ಲಿ ದೆಹಲಿಯ ಜನಪ್ರತಿನಿಧಿ ಮತ್ತು ಆತನ ಸಂಗಡಿಗರು ಬಡ ಜನರನ್ನು ಕ್ಯೂನಲ್ಲಿ ನಿಲ್ಲುವತೆ ತಾವು ಮಾಡಿರುವ ರೀತಿಯ ಬಗ್ಗೆ ಮಾತಾಡಿ ನಗುತ್ತಿದ್ದರು!
ಈ ಸರ್ಕಾರ ದೇಶದ ಸಾಮಾನ್ಯ ಬಡ ಜನರ ಬಗ್ಗೆ ಯಾವುದೇ ಕಾಳಜಿಯಿಲ್ಲದ, ಕೇವಲ ಖಾಸಗಿ ಬಂಡವಾಳಿಗರ ಲಾಭದ ಬಗ್ಗೆ ಕಾಳಜಿಯಿರುವ ಸರ್ಕಾರ. ದೇಶದ ಇತಿಹಾಸದಲ್ಲೇ ಅತ್ಯಂತ ಸಂವೇದನಾಶೂನ್ಯ ಸರ್ಕಾರ. ನ.8ರಂದು ಪ್ರಧಾನಿ ನೋಟು ರದ್ದತಿ ಘೋಷಿಸಿದ ಮರುದಿನವೇ ಎಲ್ಲಾ ಮುಖ್ಯ ಪತ್ರಿಕೆಗಳಲ್ಲಿ ಪ್ರಧಾನಿ ಮತ್ತು ಪೇಟಿಎಂ ಕಂಪೆನಿಯ ಜಾಹೀರಾತು ಬಂತು!
ನೋಟು ನಿಷೇಧ ಘೋಷಿಸುವ ಮುನ್ನೆ ಯಾವ ಪರಿಣತರ ಸಲಹೆಯೂ ಇಲ್ಲ, ಪೂರ್ವಸಿದ್ಧತೆಯೂ ಇಲ್ಲ. ಚಲಾವಣೆಯಲ್ಲಿದ್ದ ನೋಟುಗಳನ್ನು ಮುದ್ರುಸಲು ಕನಿಷ್ಟ 9 ತಿಂಗಳು ಬೇಕೇಬೇಕು. ಹೇಗೆ ರಾತ್ರೋರಾತ್ರಿ ಘೋಷಣೆ ಮಾಡಿದಿರಿ?
ಈ ದೇಶದ ಎಲ್ಲಾ ಭ್ರಷ್ಟಾಚಾರ ನಿಗ್ರಹ ಸಂಸ್ಥೆಗಳನ್ನೂ ಒಂದುಕಡೆ ನಾಶ ಮಾಡಿ ಇನ್ನೊಂದೆಡೆ ಭ್ರಷ್ಟರಿಗೆ ಕುಮ್ಮಕ್ಕು!
ಈಗ ವಿಷಲ್ ಬ್ಲೋಯರ್ಸ್ ಆಕ್ಟ್‍ನ್ನು ಜಾರಿಮಾಡಿ ಎಂದರೆ, ಅದನ್ನು ತಿದ್ದುಪಡಿ ಮಾಡುವ ತನಕ ತರುವುದಿಲ್ಲ ಎನ್ನುತ್ತಿದ್ದಾರೆ. ಈ ಕಾಯ್ದೆಗೆ 2013ರಲ್ಲೇ ಅಂಕಿತವಾಗಿತ್ತು!
ಬಡ ಶ್ರೀಸಾಮಾನ್ಯ ನಗದುರಹಿತ ವ್ಯವಹಾರ ಮಾಡಬೇಕು ಎನ್ನುವ ಈ ಸರ್ಕಾರ, ರಾಜಕೀಯ ಪಕ್ಷಗಳಿಗೆ ಬರುವ ಎಲ್ಲಾ ಹಣ ಬ್ಯಾಂಕುಗಳ ಮೂಲಕವೇ ಬರುವಂತೆ ನಗದುರಹಿತ ವಹಿವಾಟಿನ ಕಾಯ್ದೆ ತರಲು ಯಾವ ಕಾರಣಕ್ಕೂ ಸಿದ್ಧರಿಲ್ಲ!
ಇದರ ಅರ್ಥ ಏನು?
ಇವರ ಈ ಕ್ರಮ ಇಡೀ ದೇಶದ ಪ್ರತಿಯೊಬ್ಬ ಸಾಮಾನ್ಯನ ಬದುಕಿಗೆ ದೊಡ್ಡ ಹೊಡೆತ ನೀಡಿದ್ದಾರೆ. ಅದರಿಂದ ಯಾರೂ ತಪ್ಪಿಸಿಕೊಳ್ಳಲಾಗಿಲ್ಲ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನಾವು ಬದುಕುತ್ತಿದ್ದೇವೆ.
ಮನೀಶ್ ತಿವಾರಿ, ದೆಹಲಿಯ ರಾಜಕಾರಣಿ ಹೇಳಿ ನಗುತ್ತಿದ್ದ- ನಮ್ಮ ದೇಶದ ಜನರಿಗೆ ತಾವು ಕ್ಯೂನಲ್ಲಿ ನಿಂತಿರುವುದು ದೇಶಭಕ್ತಿಯಿಂದ ಎಂದು ನಂಬಿಸಿದರೆ ಸಾಕು ಎಂದು. ನಿಮ್ಮನ್ನು ಕೊಲ್ಲುತ್ತಿರುವುದು ನಿಮ್ಮ ಒಳ್ಳೆಯದಕ್ಕಾಗಿ ಎಂದು ಹೀಗೆ ತೋರಿಸಿಕೊಳ್ಳುತ್ತಿರುವ ಯಾವ ಸರ್ಕಾರವೂ ಈವರೆಗೂ ಇರಲಿಲ್ಲ.
ಎಲ್ಲಾ ಭ್ರಷ್ಟಚಾರ ನಿಗ್ರಹ ಸಂಸ್ಥೆಗಳನ್ನೂ ಹಾಳುಗೆಡವಲಾಗಿದೆ, ಮತ್ತು ಜನರ ಬದುಕನ್ನು ನಾಶ ಮಾಡಲಾಗಿದೆ ಎಂಬ ಸತ್ಯವನ್ನು ನಾವು ಜನಗಳಿಗೆ ತಿಳಿಸಬೇಕು.
ನಗದುರಹಿತ ವಹಿವಾಟು ಒಳ್ಳೆಯದು, ಆದರೆ ಅದನ್ನು ಹೀಗೆ ತರಲಾಗದು ಎಂಬುದನ್ನು ಅರ್ಥಮಾಡಿಕೊಳ್ಳಬೇಕು.
ಧನ್ಯವಾದಗಳು
– ಪ್ರಶಾಂತ್ ಭೂಷಣ್
ಹಿರಿಯ ನ್ಯಾಯವಾದಿಗಳು, ಸರ್ವೋಚ್ಚ ನ್ಯಾಯಾಲಯ ಮತ್ತು ರಾಷ್ಟ್ರೀಯ ಅಧ್ಯಕ್ಷರು, ಸ್ವರಾಜ್ ಅಭಿಯಾನ
ಕಾರ್ಯಕ್ರಮ ಆಯೋಜಿಸಿದ್ದವರು: ಕರ್ನಾಟಕ ಜನಶಕ್ತಿ, ದಲಿತ ಸಂಘರ್ಷ ಸಮಿತಿ, ಸ್ವರಾಜ್ ಅಭಿಯಾನ.

ನೋಟು ರದ್ದತಿಯ ಸಾಧಕ ಬಾಧಕಗಳ ಕುರಿತ ಬಹಿರಂಗ ಆರೋಗ್ಯಕರ ಮುಕ್ತ ಚರ್ಚೆಗೆ ಆಹ್ವಾನ

ddebate04

ಬಿಜೆಪಿ ನಾಯಕರಿಗೆ ಮುಖಾಮುಖಿ ಚರ್ಚೆಗೆ ಬರುವಂತೆ ಕೋರಿ ಕಳಿಸಿದ ರಿಜಿಸ್ಟರ್ಡ್ ಅಂಚೆಯಲ್ಲಿನ ಪೂರ್ಣ ಪಾಠ ಈ ಕೆಳಕಂಡಂತಿದೆ.

ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ & ಸ್ವರಾಜ್ ಅಭಿಯಾನ
ಸಂಪರ್ಕ: ನಾದ, ನಂ.366, 8ನೇ ಕ್ರಾಸ್, 8ನೇ ಮೇನ್, ಪದ್ಮನಾಭನಗರ, ಬೆಂಗಳೂರು. ಫೋ: ಗುರುಪ್ರಸಾದ್ ಕೆರಗೋಡು 8095234299, ಡಾ.ವಾಸು 9945516267, ರಾಜಶೇಖರ್ ಅಕ್ಕಿ 8951811745.

ತಾರೀಕು: 12.01.2017
ಇವರಿಗೆ,
ಶ್ರೀ ಬಿ.ಎಸ್.ಯಡಿಯೂರಪ್ಪ
ರಾಜ್ಯ ಅಧ್ಯಕ್ಷರು
ಭಾರತೀಯ ಜನತಾ ಪಕ್ಷ
ಬೆಂಗಳೂರು

ಶ್ರೀ ಅನಂತಕುಮಾರ್
ಕೇಂದ್ರ ಸಚಿವರು ಮತ್ತು ಮುಖಂಡರು
ಭಾರತೀಯ ಜನತಾ ಪಕ್ಷ
ಬೆಂಗಳೂರು

ಶ್ರೀ ಸಿ.ಟಿ.ರವಿ
ಶಾಸಕರು ಮತ್ತು ಮುಖಂಡರು
ಭಾರತೀಯ ಜನತಾಪಕ್ಷ
ಚಿಕ್ಕಮಗಳೂರು

ಶ್ರೀ ಚಕ್ರವರ್ತಿ ಸೂಲಿಬೆಲೆ
ಯುವಾಬ್ರಿಗೇಡ್
ಬೆಂಗಳೂರು

ಮಾನ್ಯರೇ,

ವಿಷಯ: ನೋಟು ರದ್ದತಿಯ ಸಾಧಕ ಬಾಧಕಗಳ ಕುರಿತ ಬಹಿರಂಗ ಆರೋಗ್ಯಕರ ಮುಕ್ತ ಚರ್ಚೆಗೆ ಆಹ್ವಾನ

ನವೆಂಬರ್ 8ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದರು. ಅಂದಿನಿಂದ ಅದರ ಬಗ್ಗೆ ಎರಡು ವಿರುದ್ಧ ಧ್ರುವಗಳಲ್ಲಿ ಪರ ಮತ್ತು ವಿರುದ್ಧದ ಚರ್ಚೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನಿಂದಲೂ ಕಪ್ಪುಹಣದ ಕುರಿತು, ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ಸು ತರುವ ಕುರಿತು, ಕಪ್ಪುಸಂಪತ್ತಿನ ವಿರುದ್ಧ ಸಮರ ಸಾರಬೇಕಾದ ಕುರಿತು ನರೇಂದ್ರ ಮೋದಿಯವರು ಹಾಗೂ ಬಿಜೆಪಿ ಮಾತನಾಡುತ್ತಲೇ ಇದ್ದರು. ನವೆಂಬರ್ 8ರಂದು ನೋಟು ರದ್ದತಿಯ ತೀರ್ಮಾನವನ್ನು ಘೋಷಿಸಿದ ಸಂದರ್ಭದಲ್ಲೂ ಪ್ರಧಾನಿಯವರು ಅದನ್ನು ಒತ್ತಿ ಹೇಳಿದರು. ಇದೊಂದು ಐತಿಹಾಸಿಕ ತೀರ್ಮಾನ ಎಂದು ಘೋಷಿಸಲಾಯಿತು.
ಈಗ ಈ ಕ್ರಮದಿಂದ ಎಷ್ಟು ಪ್ರಮಾಣದ ಕಪ್ಪುಹಣವನ್ನು ಹಿಡಿಯಲು ಸಾಧ್ಯವಾಯಿತು ಎಂಬುದರ ಕುರಿತು ಉತ್ತರ ನೀಡದೇ ರಿಸರ್ವ್‍ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಈ ಮಧ್ಯೆ ನಗದು ರಹಿತ ಆರ್ಥಿಕತೆಯ ಕುರಿತು ಸಾಕಷ್ಟು ಚರ್ಚೆ ಹಾಗೂ ಕ್ರಮಗಳು ಶುರುವಾಗಿವೆ.
ಇವೆಲ್ಲವೂ ದೇಶದ ಆರ್ಥಿಕತೆಯ ಮೇಲೆ, ಅದರಲ್ಲೂ ಜನಸಾಮಾನ್ಯರ ಮೇಲೆ ಭಾರೀ ದೊಡ್ಡ ಪರಿಣಾಮವನ್ನು ಬೀರಿದೆ. ದೇಶಕ್ಕೆ ಸುಮಾರು 1.50 ಲಕ್ಷ ಕೋಟಿ ರೂ.ಗಳಿಂದ 4.50 ಲಕ್ಷ ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಎಂದು ಕೆಲವು ಸ್ವತಂತ್ರ ಸಂಸ್ಥೆಗಳ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ, ಒಂದು ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣವೂ ದೇಶದ ಬೊಕ್ಕಸಕ್ಕೆ ಬಂದಂತೆ ಆಗಿಲ್ಲ. ಈ ಪ್ರಮಾಣದ ವಿರುದ್ಧ ಅಭಿಪ್ರಾಯಗಳು ಇರುವಾಗ ಪರಸ್ಪರ ಆರೋಪ ಮಾಡಿಕೊಂಡು ಇರುವುದು ಸರಿಯಲ್ಲ. ಏಕೆಂದರೆ ಕಪ್ಪುಹಣದ ವಿರುದ್ಧ ನಿರ್ಣಾಯಕ ಹೋರಾಟ ಅತ್ಯಗತ್ಯವಾದುದು. ನಗದುರಹಿತ ಆರ್ಥಿಕತೆ ಬರುವುದರಿಂದ ದೇಶಕ್ಕೆ ಒಳ್ಳೆಯದಾಗುವುದಿದ್ದರೆ ಅದರ ಕುರಿತೂ ಚರ್ಚೆ ನಡೆದು ಜಾರಿಯಾಗಬೇಕು. ಇಲ್ಲದಿದ್ದರೆ, ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬುದು ಬಹಿರಂಗವಾಗಬೇಕು. ನೋಟು ರದ್ದತಿ ಕ್ರಮದಿಂದ ಯಾರಿಗೆ ನಷ್ಟವಾಗಿದೆಯೋ ಅವರಿಗೆ ಅದನ್ನು ತುಂಬಿಕೊಡಬೇಕು.
ಆದರೆ ಇದಾವುದೂ ಸಾಧ್ಯವಾಗುವಂತೆ ಕಾಣುತ್ತಿಲ್ಲ. ಬದಲಿಗೆ ಈಗಾಗಲೇ ದೇಶದ ಉದ್ದಿಮೆದಾರರು ಕೇಂದ್ರ ಹಣಕಾಸು ಸಚಿವರನ್ನು ಕಂಡು ತಮಗೆ ತೆರಿಗೆ ವಿನಾಯಿತಿ ಕೊಡಬೇಕೆಂದು ಕೇಳಿದ್ದಾರೆ ಮತ್ತು ಅರುಣ್ ಜೇಟ್ಲಿಯವರು ತೆರಿಗೆ ಕಡಿತಗೊಳಿಸುವ ಭರವಸೆಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಕೆಲವು ಸಂಘಟನೆಗಳು ಬಿಜೆಪಿಯ ಪ್ರತಿನಿಧಿಗಳನ್ನು ‘ಬಹಿರಂಗ ಮುಕ್ತ ಚರ್ಚೆಗೆ’ ಆಹ್ವಾನಿಸುತ್ತಿದ್ದೇವೆ. ನೋಟು ರದ್ದತಿಯಿಂದ ಒಳ್ಳೆಯದಾಗಿದೆ ಎಂದು ಬಿಜೆಪಿ ಪಕ್ಷ ನಿಜಕ್ಕೂ ಭಾವಿಸುವುದಾದಲ್ಲಿ ತಾವು ಈ ಚರ್ಚೆಗೆ ಹಿಂಜರಿಯುವುದಿಲ್ಲವೆಂದು ಭಾವಿಸುತ್ತೇವೆ.
ಬಿಜೆಪಿಯ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪ, ತಮ್ಮ ವಕ್ತಾರರಾದ ಶ್ರೀ ಸಿ.ಟಿ.ರವಿ, ಕೇಂದ್ರ ಮಂತ್ರಿಗಳಾದ ಶ್ರೀ ಅನಂತಕುಮಾರ್ ಅಥವಾ ಈ ಕ್ರಮವನ್ನು ಸಮರ್ಥಿಸಿಕೊಂಡು ರಾಜ್ಯದ ಹಲವೆಡೆ ಭಾಷಣ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅಥವಾ ಬಿಜೆಪಿ ಪಕ್ಷವು ಸೂಚಿಸುವ ಇನ್ನಾರೇ ವ್ಯಕ್ತಿ ಈ ಚರ್ಚೆಯಲ್ಲಿ ಪಾಲ್ಗೊಳ್ಳಬಹುದು ಎಂದು ಈ ಮೂಲಕ ಆಹ್ವಾನಿಸುತ್ತಿದ್ದೇವೆ.
ಈ ಬಹಿರಂಗ ಮುಕ್ತ ಚರ್ಚೆಯು ಜನವರಿ 22ರಂದು 10.30ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್‍ನಲ್ಲಿ ನಡೆಯಲಿದೆ. ಕಪ್ಪುಹಣದ ವಿರುದ್ಧದ ಸಮರದಲ್ಲಿ ದೊಡ್ಡ ಪಾತ್ರ ವಹಿಸಿರುವ, ಕಾಂಗ್ರೆಸ್ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆಳೆದ ಸುಪ್ರೀಂಕೋರ್ಟ್‍ನ ಹಿರಿಯ ವಕೀಲ ಹಾಗೂ ಸ್ವರಾಜ್ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಭೂಷಣ್‍ರು ಈ ಕಾರ್ಯಕ್ರಮದಲ್ಲಿ ಆಶಯ ಭಾಷಣವನ್ನು ಮಾಡಲಿದ್ದಾರೆ. ಆ ನಂತರ ಸತ್ಯಕ್ಕೆ ಮುಖಾಮುಖಿಯಾಗುವ ಚರ್ಚೆ ನಡೆಯುತ್ತದೆ.
ಚರ್ಚೆಯು ರಾಜ್ಯದ ರೈತ ಪ್ರತಿನಿಧಿಗಳು, ಸಣ್ಣ ಉದ್ದಿಮೆದಾರರು, ಎಪಿಎಂಸಿ ವರ್ತಕರು, ಬೀದಿ ವ್ಯಾಪಾರಿಗಳು, ವರ್ತಕರು, ಕಾರ್ಮಿಕ ಸಂಘಗಳು, ಅನೌಪಚಾರಿಕ ವಲಯ, ಗ್ರಾಮೀಣ ಬ್ಯಾಂಕ್ ಮತ್ತು ಸಹಕಾರ ಕ್ಷೇತ್ರ, ಸಿನೆಮಾ ಕ್ಷೇತ್ರ, ಕಟ್ಟಡ ನಿರ್ಮಾಣ ಕ್ಷೇತ್ರ, ಆಟೋ ಚಾಲಕರು, ಹೋಟೆಲ್ ಉದ್ದಿಮೆ, ಸಾರಿಗೆ ಉದ್ದಿಮೆಗಳ ಪ್ರತಿನಿಧಿಗಳು ಮತ್ತು ಇನ್ನಿತರ ಗಣ್ಯರ ಎದುರಿನಲ್ಲಿ ನಡೆಯುತ್ತದೆ ಮತ್ತು ಅವರೂ ಈ ಚರ್ಚೆಯಲ್ಲಿ ಪ್ರತಿಕ್ರಿಯಿಸಲಿದ್ದಾರೆ.

ಈ ಕೆಳಕಂಡ ಅಂಶಗಳು ಚರ್ಚೆಯಲ್ಲಿ ಇರಬೇಕೆಂದು ನಾವು ಸೂಚಿಸುತ್ತಿದ್ದೇವೆ.
• ನೋಟು ರದ್ದತಿಯ ಕ್ರಮದಿಂದ ಕಪ್ಪುಹಣ ಕಡಿಮೆಯಾಗಲು ಸಾಧ್ಯವಿತ್ತೇ? ಕೇಂದ್ರ ಸರ್ಕಾರ ಹೇಳಿದಷ್ಟು ಕಪ್ಪುಹಣ ಪತ್ತೆಯಾಯಿತೇ?
• ಈ ಕ್ರಮದಿಂದ ತಕ್ಷಣದಲ್ಲಿ ನಷ್ಟ ಯಾರಿಗೆ ಆಗಿದೆ? ಎಷ್ಟು ಆಗಿದೆ? ಲಾಭ ಯಾರಿಗೆ ಆಗಿದೆ? ಎಷ್ಟು ಆಗಿದೆ?
• ಕಪ್ಪುಹಣ ಹೊರಗೆ ಬರಲು ನಿಜಕ್ಕೂ ಆಗಬೇಕಾದ ಕ್ರಮಗಳು ಯಾವುವು? ಅದರ ಬಗ್ಗೆ ಮೋದಿ ಸರ್ಕಾರವು ಗಂಭೀರವಾಗಿದೆಯೇ?
• ನಗದುರಹಿತ (ಛಿಚಿshಟess) ಆರ್ಥಿಕತೆಯ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ (ಬಿಜೆಪಿ ಮಾತ್ರವಲ್ಲಾ, ಎಲ್ಲಾ ಪಕ್ಷಗಳ) ವಂತಿಗೆಯನ್ನು ನಗದುರಹಿತ ಮತ್ತು ಪಾರದರ್ಶಕ ಮಾಡಲು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಈಗಲಾದರೂ ಆ ನಿಟ್ಟಿನಲ್ಲಿ ಮುಂದಾಗುವರೇ?
• ನಗದುರಹಿತ ಆರ್ಥಿಕತೆ ಯಶಸ್ವಿಯಾಗಿರುವ ದೇಶಗಳು ಯಾವುವು? ಅಲ್ಲಿ ಅಳವಡಿಸಿದ ವಿಧಾನಗಳು ಯಾವುವು? ಎಷ್ಟು ಪ್ರಮಾಣದ ನಗದುರಹಿತ ಆರ್ಥಿಕತೆ ಅಲ್ಲಿ ಸಾಧ್ಯವಾಗಿದೆ? ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಆಗಬಹುದು? ಭಾರತಕ್ಕೆ ಹೊಂದುವ ವಿಧಾನ ಯಾವುದು?
• ಸದರಿ ಕ್ರಮದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು. ಲಾಭ ಮಾಡಿಕೊಂಡವರ ಮೇಲೆ ತೆರಿಗೆ ಹಾಕಬೇಕು. ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳ ಆಲೋಚನೆಯೇನಾದರೂ ಸರ್ಕಾರದ ಮುಂದೆ ಇದೆಯೇ?

ಈ ಪ್ರಶ್ನೆಗಳ ಕುರಿತಾಗಿ ಚರ್ಚಿಸಿ, ದೇಶದ ಹಿತದೃಷ್ಟಿಯಿಂದ ಕಪ್ಪುಹಣದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಮುಂದಾಗುವ ಕುರಿತು ಸದರಿ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಹಾಗೆಯೇ ನಷ್ಟಕ್ಕೊಳಗಾದ ಜನವರ್ಗಗಳಿಗೆ ಪರಿಹಾರ ಕಲ್ಪಿಸುವ ಕುರಿತು ನಿರ್ಣಯ ಮಾಡಲಾಗುತ್ತದೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ಬಿಜೆಪಿ ಮತ್ತು ತಮ್ಮ ಪರಿವಾರದ ಪ್ರತಿನಿಧಿಗಳು ಈ ಚರ್ಚೆ ಮಾಡಲು ಹಿಂಜರಿಯುವುದಿಲ್ಲವೆಂದೂ, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಳ್ಳುವಿರೆಂದೂ ಭಾವಿಸುತ್ತೇವೆ.

ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿಗಳು

(ವಾಸು ಎಚ್.ವಿ)
ಸಂಘಟನೆಗಳ ಪರವಾಗಿ

ನೋಟು ರದ್ದತಿ ಉದ್ದೇಶ, ಪರಿಣಾಮದ ಕುರಿತು ‘ಬಹಿರಂಗ ಮುಕ್ತ ಚರ್ಚೆ’ಗೆ ಬಿಜೆಪಿ ನಾಯಕರಿಗೆ ಆಹ್ವಾನ

*ನೋಟು ರದ್ದತಿ ಉದ್ದೇಶ, ಪರಿಣಾಮದ ಕುರಿತು ‘ಬಹಿರಂಗ ಮುಕ್ತ ಚರ್ಚೆ’ಗೆ ಬಿಜೆಪಿ ನಾಯಕರಿಗೆ ಆಹ್ವಾನ*

*ಪ್ರಮುಖ ಪ್ರಶ್ನೆಗಳ ಕುರಿತು ಮುಖಾಮುಖಿ ಚರ್ಚೆ: ಉದ್ದಿಮೆದಾರರು, ರೈತರು, ವರ್ತಕರು, ಕಾರ್ಮಿಕ ಸಂಘಗಳು, ಹಿರಿಯ ಗಣ್ಯರು, ಬ್ಯಾಂಕ್ ನೌಕರರು, ಅನೌಪಚಾರಿಕ ವಲಯ, ಸಿನೆಮಾ ಕ್ಷೇತ್ರ, ಬೀದಿ ವ್ಯಾಪಾರಿಗಳಿಂದ ಪ್ರತಿಕ್ರಿಯೆ*

*ಬನ್ನಿ ಸತ್ಯಕ್ಕೆ ಮುಖಾಮುಖಿಯಾಗೋಣ, ಕಪ್ಪುಹಣದ ವಿರುದ್ಧ ನಿರ್ಣಾಯಕ ಹೋರಾಟದಿಂದ ಪ್ರಧಾನಿ ಓಡಿ ಹೋಗಬಾರದು*

ಎರಡು ತಿಂಗಳ ಹಿಂದೆ ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರವು 500 ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದ್ದು ಅದರ ಬಗ್ಗೆ ಎರಡು ವಿರುದ್ಧ ಧ್ರುವಗಳಲ್ಲಿ ಪರ ಮತ್ತು ವಿರುದ್ಧದ ಚರ್ಚೆಯಾಗುತ್ತಿದೆ. ಕಳೆದ ಲೋಕಸಭಾ ಚುನಾವಣೆಗೆ ಮುಂಚಿನಿಂದಲೂ ಕಪ್ಪುಹಣದ ಕುರಿತು, ವಿದೇಶೀ ಬ್ಯಾಂಕುಗಳಲ್ಲಿರುವ ಕಪ್ಪುಹಣವನ್ನು ವಾಪಸ್ಸು ತರುವ ಕುರಿತು, ಕಪ್ಪುಸಂಪತ್ತಿನ ವಿರುದ್ಧ ಸಮರ ಸಾರಬೇಕಾದ ಕುರಿತು ನರೇಂದ್ರ ಮೋದಿಯವರು ಹಾಗೂ ಬಿಜೆಪಿ ಮಾತನಾಡುತ್ತಲೇ ಇದ್ದರು. ನವೆಂಬರ್ 8ರಂದು ನೋಟು ರದ್ದತಿಯ ತೀರ್ಮಾನವನ್ನು ಘೋಷಿಸಿದ ಸಂದರ್ಭದಲ್ಲೂ ಪ್ರಧಾನಿಯವರು ಅದನ್ನು ಒತ್ತಿ ಹೇಳಿದರು. ಇದೊಂದು ಐತಿಹಾಸಿಕ ತೀರ್ಮಾನ ಎಂದು ಘೋಷಿಸಲಾಯಿತು. ದೇಶಕ್ಕೆ ಆಗುತ್ತಿರುವ ಭಾರೀ ಪ್ರಮಾಣದ ಲಾಭವನ್ನು ಪಡೆದುಕೊಳ್ಳಲು, 50 ದಿನಗಳ ಕಾಲ ಸ್ವಲ್ಪ ತೊಂದರೆಯನ್ನು ಸಹಿಸಿಕೊಳ್ಳಬೇಕೆಂಬ ಕರೆಯನ್ನು ನೀಡಲಾಯಿತು.
ಈಗ ಈ ಕ್ರಮದಿಂದ ಎಷ್ಟು ಪ್ರಮಾಣದ ಕಪ್ಪುಹಣವನ್ನು ಹಿಡಿಯಲು ಸಾಧ್ಯವಾಯಿತು ಎಂಬುದರ ಕುರಿತು ಉತ್ತರ ನೀಡದೇ ರಿಸರ್ವ್.ಬ್ಯಾಂಕ್ ಮತ್ತು ಕೇಂದ್ರ ಸರ್ಕಾರಗಳು ನುಣುಚಿಕೊಳ್ಳುತ್ತಿವೆ. ಈ ಮಧ್ಯೆ ನಗದು ರಹಿತ ಆರ್ಥಿಕತೆಯ ಕುರಿತು ಸಾಕಷ್ಟು ಚರ್ಚೆ ಹಾಗೂ ಕ್ರಮಗಳು ಶುರುವಾಗಿವೆ.
ಇವೆಲ್ಲವೂ ದೇಶದ ಆರ್ಥಿಕತೆಯ ಮೇಲೆ, ಅದರಲ್ಲೂ ಜನಸಾಮಾನ್ಯರ ಮೇಲೆ ಭಾರೀ ದೊಡ್ಡ ಪರಿಣಾಮವನ್ನು ಬೀರಿದೆ. ದೇಶಕ್ಕೆ ಸುಮಾರು 1.50 ಲಕ್ಷ ಕೋಟಿ ರೂ.ಗಳಿಂದ 4.50 ಲಕ್ಷ ಕೋಟಿ ರೂ.ಗಳವರೆಗೆ ನಷ್ಟವಾಗಿದೆ ಎಂದು ಕೆಲವು ಸ್ವತಂತ್ರ ಸಂಸ್ಥೆಗಳ ಲೆಕ್ಕಾಚಾರಗಳು ಹೇಳುತ್ತಿವೆ. ಆದರೆ, ಒಂದು ಲಕ್ಷ ಕೋಟಿ ರೂ.ಗಳಷ್ಟು ಕಪ್ಪು ಹಣವೂ ದೇಶದ ಬೊಕ್ಕಸಕ್ಕೆ ಬಂದಂತೆ ಆಗಿಲ್ಲ. ಈ ಪ್ರಮಾಣದ ವಿರುದ್ಧ ಅಭಿಪ್ರಾಯಗಳು ಇರುವಾಗ ಪರಸ್ಪರ ಆರೋಪ ಮಾಡಿಕೊಂಡು ಇರುವುದು ಸರಿಯಲ್ಲ. ಏಕೆಂದರೆ ಕಪ್ಪುಹಣದ ವಿರುದ್ಧ ನಿರ್ಣಾಯಕ ಹೋರಾಟ ಅತ್ಯಗತ್ಯವಾದುದು. ನಗದುರಹಿತ ಆರ್ಥಿಕತೆ ಬರುವುದರಿಂದ ದೇಶಕ್ಕೆ ಒಳ್ಳೆಯದಾಗುವುದಿದ್ದರೆ ಅದರ ಕುರಿತೂ ಚರ್ಚೆ ನಡೆದು ಜಾರಿಯಾಗಬೇಕು. ಇಲ್ಲದಿದ್ದರೆ, ಯಾರಿಗೆ ಲಾಭ? ಯಾರಿಗೆ ನಷ್ಟ ಎಂಬುದು ಬಹಿರಂಗವಾಗಬೇಕು. ನೋಟು ರದ್ದತಿ ಕ್ರಮದಿಂದ ಯಾರಿಗೆ ನಷ್ಟವಾಗಿದೆಯೋ ಅವರಿಗೆ ಅದನ್ನು ತುಂಬಿಕೊಡಬೇಕು.
ಬಿಜೆಪಿ ಮತ್ತು ವಿರೋಧ ಪಕ್ಷ ಕಾಂಗ್ರೆಸ್ಸುಗಳ ಆರೋಪ ಪ್ರತ್ಯಾರೋಪಗಳಲ್ಲಿ ಇದಾವುದೂ ಸಾಧ್ಯವಾಗುವಂತೆ ಕಾಣುತ್ತಿಲ್ಲ. ಬದಲಿಗೆ ಈಗಾಗಲೇ ದೇಶದ ಉದ್ದಿಮೆದಾರರು ಕೇಂದ್ರ ಹಣಕಾಸು ಸಚಿವರನ್ನು ಕಂಡು ತಮಗೆ ತೆರಿಗೆ ವಿನಾಯಿತಿ ಕೊಡಬೇಕೆಂದು ಕೇಳಿದ್ದಾರೆ ಮತ್ತು ಅರುಣ್ ಜೇಟ್ಲಿಯವರು ತೆರಿಗೆ ಕಡಿತಗೊಳಿಸುವ ಭರವಸೆಯನ್ನೂ ನೀಡಿದ್ದಾರೆ. ಬಹುಶಃ ಬಿಜೆಪಿ, ಕಾಂಗ್ರೆಸ್ಸುಗಳ ಈ ಪ್ರಹಸನವು ಕಡೆಯಲ್ಲಿ ಗೊಂದಲವನ್ನಷ್ಟೇ ಸೃಷ್ಟಿಸಿ, ಜನಸಾಮಾನ್ಯರ ಕೊರಳಿಗೆ ಉರುಳಾಗುವ ಸಾಧ್ಯತೆಯೇ ಹೆಚ್ಚು.
ಈ ಹಿನ್ನೆಲೆಯಲ್ಲಿ ಜನಪರವಾಗಿ ಕೆಲಸ ಮಾಡುತ್ತಿರುವ ಕೆಲವು ಸಂಘಟನೆಗಳು ಬಿಜೆಪಿಯ ಪ್ರತಿನಿಧಿಗಳನ್ನು ‘ಬಹಿರಂಗ ಮುಕ್ತ ಚರ್ಚೆಗೆ’ ಆಹ್ವಾನಿಸುತ್ತಿದ್ದೇವೆ. ನೋಟು ರದ್ದತಿಯಿಂದ ಒಳ್ಳೆಯದಾಗಿದೆ ಎಂದು ಬಿಜೆಪಿ ಪಕ್ಷ ಹಾಗೂ ಅದರ ಬೆಂಬಲಿಗರು ನಿಜಕ್ಕೂ ಭಾವಿಸುವುದಾದಲ್ಲಿ ಅವರು ಈ ಚರ್ಚೆಗೆ ಹಿಂಜರಿಯುವುದಿಲ್ಲವೆಂದು ಭಾವಿಸುತ್ತೇವೆ. ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಅದರ ವಕ್ತಾರ ಸಿ.ಟಿ.ರವಿ, ಕೇಂದ್ರ ಮಂತ್ರಿ ಅನಂತಕುಮಾರ್ ಅಥವಾ ಈ ಕ್ರಮವನ್ನು ಸಮರ್ಥಿಸಿಕೊಂಡು ರಾಜ್ಯದ ಹಲವೆಡೆ ಭಾಷಣ ಮಾಡುತ್ತಿರುವ ಚಕ್ರವರ್ತಿ ಸೂಲಿಬೆಲೆ ಅಥವಾ ಬಿಜೆಪಿ ಪಕ್ಷವು ಸೂಚಿಸುವ ಇನ್ನಾರೇ ವ್ಯಕ್ತಿ ಈ ಚರ್ಚೆಯಲ್ಲಿ ಪಾಲ್ಗೊಳ್ಳಲಿ ಎಂದು ಈ ಮೂಲಕ ಬಹಿರಂಗವಾಗಿ ಆಹ್ವಾನಿಸುತ್ತಿದ್ದೇವೆ.
ಈ ಬಹಿರಂಗ ಮುಕ್ತ ಚರ್ಚೆಯು ಜನವರಿ 22ರಂದು 10.30ರಿಂದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಸೆನೆಟ್ ಹಾಲ್ನಲ್ಲಿ ನಡೆಯಲಿದೆ. ಕಪ್ಪುಹಣದ ವಿರುದ್ಧದ ಸಮರದಲ್ಲಿ ದೊಡ್ಡ ಪಾತ್ರ ವಹಿಸಿರುವ, ಕಾಂಗ್ರೆಸ್ ಸರ್ಕಾರದ ಹಲವು ಹಗರಣಗಳನ್ನು ಬಯಲಿಗೆಳೆದ ಸುಪ್ರೀಂಕೋರ್ಟ್‍.ನ ಹಿರಿಯ ವಕೀಲ ಹಾಗೂ ಸ್ವರಾಜ್ ಅಭಿಯಾನದ ರಾಷ್ಟ್ರೀಯ ಅಧ್ಯಕ್ಷ ಪ್ರಶಾಂತ್ ಭೂಷಣ್ರುೆ ಈ ಕಾರ್ಯಕ್ರಮದಲ್ಲಿ ಆಶಯ ಭಾಷಣವನ್ನು ಮಾಡಲಿದ್ದಾರೆ. ಆ ನಂತರ ಸತ್ಯಕ್ಕೆ ಮುಖಾಮುಖಿಯಾಗುವ ಚರ್ಚೆ ನಡೆಯುತ್ತದೆ.
ಚರ್ಚೆಯು ರಾಜ್ಯದ ರೈತ ಪ್ರತಿನಿಧಿಗಳು, ಸಣ್ಣ ಉದ್ದಿಮೆದಾರರು, ಎಪಿಎಂಸಿ ವರ್ತಕರು, ಬೀದಿ ವ್ಯಾಪಾರಿಗಳು, ವರ್ತಕರು, ಕಾರ್ಮಿಕ ಸಂಘಗಳು, ಅನೌಪಚಾರಿಕ ವಲಯ, ಗ್ರಾಮೀಣ ಬ್ಯಾಂಕ್ ಮತ್ತು ಸಹಕಾರ ಕ್ಷೇತ್ರ, ಸಿನೆಮಾ ಕ್ಷೇತ್ರ, ಕಟ್ಟಡ ನಿರ್ಮಾಣ ಕ್ಷೇತ್ರ, ಆಟೋ ಚಾಲಕರು, ಹೋಟೆಲ್ ಉದ್ದಿಮೆ, ಸಾರಿಗೆ ಉದ್ದಿಮೆಗಳ ಪ್ರತಿನಿಧಿಗಳು ಮತ್ತು ಇನ್ನಿತರ ಗಣ್ಯರ ಎದುರಿನಲ್ಲಿ ನಡೆಯುತ್ತದೆ ಮತ್ತು ಅವರೂ ಈ ಚರ್ಚೆಯಲ್ಲಿ ಪ್ರತಿಕ್ರಿಯಿಸಲಿದ್ದಾರೆ.

ಈ ಕೆಳಕಂಡ ಅಂಶಗಳು ಚರ್ಚೆಯಲ್ಲಿ ಇರಬೇಕೆಂದು ನಾವು ಸೂಚಿಸುತ್ತಿದ್ದೇವೆ.

*ನೋಟು ರದ್ದತಿಯ ಕ್ರಮದಿಂದ ಕಪ್ಪುಹಣ ಕಡಿಮೆಯಾಗಲು ಸಾಧ್ಯವಿತ್ತೇ? ಕೇಂದ್ರ ಸರ್ಕಾರ ಹೇಳಿದಷ್ಟು ಕಪ್ಪುಹಣ ಪತ್ತೆಯಾಯಿತೇ?*
*ಈ ಕ್ರಮದಿಂದ ತಕ್ಷಣದಲ್ಲಿ ನಷ್ಟ ಯಾರಿಗೆ ಆಗಿದೆ? ಎಷ್ಟು ಆಗಿದೆ? ಲಾಭ ಯಾರಿಗೆ ಆಗಿದೆ? ಎಷ್ಟು ಆಗಿದೆ?*
*ಕಪ್ಪುಹಣ ಹೊರಗೆ ಬರಲು ನಿಜಕ್ಕೂ ಆಗಬೇಕಾದ ಕ್ರಮಗಳು ಯಾವುವು? ಅದರ ಬಗ್ಗೆ ಮೋದಿ ಸರ್ಕಾರವು ಗಂಭೀರವಾಗಿದೆಯೇ?*
*ನಗದುರಹಿತ (cashless) ಆರ್ಥಿಕತೆಯ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ (ಬಿಜೆಪಿ ಮಾತ್ರವಲ್ಲಾ, ಎಲ್ಲಾ ಪಕ್ಷಗಳ) ವಂತಿಗೆಯನ್ನು ನಗದುರಹಿತ ಮತ್ತು ಪಾರದರ್ಶಕ ಮಾಡಲು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಈಗಲಾದರೂ ಆ ನಿಟ್ಟಿನಲ್ಲಿ ಮುಂದಾಗುವರೇ?*
*ನಗದುರಹಿತ ಆರ್ಥಿಕತೆ ಯಶಸ್ವಿಯಾಗಿರುವ ದೇಶಗಳು ಯಾವುವು? ಅಲ್ಲಿ ಅಳವಡಿಸಿದ ವಿಧಾನಗಳು ಯಾವುವು? ಎಷ್ಟು ಪ್ರಮಾಣದ ನಗದುರಹಿತ ಆರ್ಥಿಕತೆ ಅಲ್ಲಿ ಸಾಧ್ಯವಾಗಿದೆ? ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಆಗಬಹುದು? ಭಾರತಕ್ಕೆ ಹೊಂದುವ ವಿಧಾನ ಯಾವುದು?*
*ಸದರಿ ಕ್ರಮದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು. ಲಾಭ ಮಾಡಿಕೊಂಡವರ ಮೇಲೆ ತೆರಿಗೆ ಹಾಕಬೇಕು. ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳ ಆಲೋಚನೆಯೇನಾದರೂ ಸರ್ಕಾರದ ಮುಂದೆ ಇದೆಯೇ?*

ಈ ಪ್ರಶ್ನೆಗಳ ಕುರಿತಾಗಿ ಚರ್ಚಿಸಿ, ದೇಶದ ಹಿತದೃಷ್ಟಿಯಿಂದ ಕಪ್ಪುಹಣದ ವಿರುದ್ಧದ ನಿರ್ಣಾಯಕ ಹೋರಾಟಕ್ಕೆ ಮುಂದಾಗುವ ಕುರಿತು ಸದರಿ ಕಾರ್ಯಕ್ರಮದಲ್ಲಿ ನಿರ್ಣಯ ಕೈಗೊಳ್ಳಲಾಗುತ್ತದೆ. ಹಾಗೆಯೇ ನಷ್ಟಕ್ಕೊಳಗಾದ ಜನವರ್ಗಗಳಿಗೆ ಪರಿಹಾರ ಕಲ್ಪಿಸುವ ಕುರಿತು ನಿರ್ಣಯ ಮಾಡಲಾಗುತ್ತದೆ. ಇಂತಹ ಮಹತ್ವದ ಕಾರ್ಯಕ್ರಮದಲ್ಲಿ ನಾಡಿನ ಪ್ರಜ್ಞಾವಂತರು ಪಾಲ್ಗೊಳ್ಳಬೇಕೆಂದು ಕೋರುತ್ತೇವೆ.
ಮೇಲೆ ಹೆಸರಿಸಲಾದ ಬಿಜೆಪಿ ಮತ್ತದರ ಪರಿವಾರದ ಪ್ರತಿನಿಧಿಗಳು ಈ ಚರ್ಚೆಗೆ ಹೆದರುವುದಿಲ್ಲವೆಂದೂ, ಸಕ್ರಿಯವಾಗಿ ಇದರಲ್ಲಿ ಪಾಲ್ಗೊಳ್ಳುವರೆಂದೂ ಭಾವಿಸುತ್ತೇವೆ.

ಸಂಪರ್ಕ: ನಾದ, ನಂ.366, 8ನೇ ಕ್ರಾಸ್, 8ನೇ ಮೇನ್, ಪದ್ಮನಾಭನಗರ, ಬೆಂಗಳೂರು. ಫೋ: ಡಾ.ವಾಸು-ಜನಶಕ್ತಿ 9945516267, ಗುರುಪ್ರಸಾದ್ ಕೆರಗೋಡು-ದಸಂಸ 8095234299, ರಾಜಶೇಖರ್ ಅಕ್ಕಿ-ಸ್ವರಾಜ್ ಅಭಿಯಾನ 8951811745, ಜೆ.ಎಂ.ವೀರಸಂಗಯ್ಯ-ರೈತಸಂಘ 9342658829.